ಬೆಂಗಳೂರು:ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜೇಮ್ಸ್ ಸಿನಿಮಾಗೆ ಯಾವುದೇ ಸಮಸ್ಯೆ ಆಗಿಲ್ಲ. ಜೇಮ್ಸ್ ಸಿನಿಮಾ ಬಗ್ಗೆ ನಿರ್ಮಾಪಕರು ಸಿಎಂ ಜೊತೆ ಹೇಳಿಕೊಂಡಿದ್ದಾರೆ ಅಷ್ಟೇ. ಆದರೆ ಜೇಮ್ಸ್ ಸಿನಿಮಾಗೆ ಸಮಸ್ಯೆ ಆಗಿದೆ ಅಂತಾ ಹೇಳಿಲ್ಲ ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಮುಂದೆ ಪ್ರತಿಭಟನೆ ವೇಳೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್ ಮಾತನಾಡಿದರು. ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಜೇಮ್ಸ್ ಎತ್ತಂಗಡಿ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಮುಂದೆ ಪ್ರವೀಣ್ ಶೆಟ್ಟಿ ನೇತೃತ್ವದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಅಲ್ಲಿಗೆ ಆಗಮಿಸಿದ ಶಿವಣ್ಣ ಈ ರೀತಿ ಹೇಳಿಕೆ ನೀಡಿದ್ದಾರೆ.
ಕಾಶ್ಮೀರ್ ಫೈಲ್ಸ್ಗೂ RRRಗೂ ಯಾವುದೇ ಸಂಬಂಧ ಇಲ್ಲ. ಕಾಶ್ಮೀರ್ ಫೈಲ್ಸ್ ಸಿನಿಮಾ ಎಲ್ಲ ಕಡೆ ಒಳ್ಳೆಯ ಪ್ರದರ್ಶನ ನಡೆಯುತ್ತಿದೆಯಲ್ಲ. ಯಾವುದೇ ಒಳ್ಳೆಯ ಸಿನಿಮಾ ಪ್ರದರ್ಶನ ಕಾಣುತ್ತಿರುವಾಗ ಅದನ್ನು ತೆಗೆಯಬಾರದು. ಅದನ್ನೇ ನಮ್ಮ ಅಪ್ಪ ಅಮ್ಮ ನಮಗೆ ಹೇಳಿಕೊಟ್ಟಿರೋದು ಎಂದರು.
ನಿರ್ಮಾಪಕ ಕಿಶೋರ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರದ ಬಗ್ಗೆ ಮಾತನಾಡಿ ಶಿವರಾಜ್‌ಕುಮಾರ್, ನಾನು ಇಲ್ಲಿ ರಾಜಕೀಯ ಮಾತನಾಡೋಕೆ ಬಂದಿಲ್ಲ. ನಾನೊಬ್ಬ ಇಂಡಸ್ಟ್ರಿಯ ನಟನಾಗಿ, ಶಿವಣ್ಣನಾಗಿ ಮಾತನಾಡಲು ಬಂದಿದ್ದೇನೆ. ಯಾವುದೇ ರಾಜಕಾರಣ ಇಲ್ಲಿ ಬೇಡ. ನಾನು ಶಕ್ತಿಧಾಮ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಲು ಬಂದಿದ್ದೆ.
ಇದೇ ಸಮಯದಲ್ಲಿ ಜೇಮ್ಸ್ ನಿರ್ಮಾಪಕರಿಗೂ ನೀವೇ ಬಂದು ಸಿಎಂ ಬಳಿ ಮಾತನಾಡಿ ಎಂದು ಹೇಳಿದ್ದೆ. ಏನು ಸಮಸ್ಯೆ ಆಗುತ್ತಿದೆ ಅನ್ನೋದು ನನಗೆ ಗೊತ್ತಿಲ್ಲ. ಅಭಿಮಾನಿಗಳ ಆರೋಪದ ಬಗ್ಗೆ ಗೊತ್ತಿಲ್ಲ. ಎಷ್ಟು ಥಿಯೇಟರ್‌ಗಳಲ್ಲಿ ಜೇಮ್ಸ್ ಸಿನಿಮಾ ನಡೆಯುತ್ತಿದೆ ಎಂದು ಪರಿಶೀಲಿಸಿ ಜನತೆಗೆ ನೀವು ಹೇಳಬೇಕು ಎಂದರು.