ಬೆಂಗಳೂರು :ಡಿಸೆಂಬರ್ ಮೊದಲ ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಜಕ್ಕೂರು ವೈಮಾನಿಕ ಶಾಲೆ ಉದ್ಘಾಟಿಸಲು ಯೋಜಿಸಲಾಗಿದೆ. ಈಗಾಗಲೇ ಡಿಜಿಸಿಎ ಪರೀಕ್ಷೆ ನಡೆಸಿದೆ. ಅದು ಅನುಮತಿ ನೀಡುವುದೊಂದೇ ಬಾಕಿ ಇದೆ.
ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ರನ್ ವೇ ಕಾಮಗಾರಿ ನಡೆಸಲಾಗಿದೆ.
ವೈಮಾನಿಕ ತರಬೇತಿ ಕೇಂದ್ರ ಪುನರ್ ಆರಂಭಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿರುವ ಹಿನ್ನೆಲೆ ಮೂರು ದಿನಗಳ ಹಿಂದಷ್ಟೇ ಡಿಜಿಸಿಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ಡಿಜಿಸಿಎಯಿಂದ ಗ್ರೀನ್ ಸಿಗ್ನಲ್ ದೊರೆಯಲಿದೆ.
ಡಿಜಿಸಿಎ ಗ್ರೀನ್ ಸಿಗ್ನಲ್ ನೀಡಿದ ಕೂಡಲೇ ಉದ್ಘಾಟನೆಗೆ ದಿನಾಂಕ ನಿಗದಿಯಾಗಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಹೊಸ ರನ್ ವೇ 974 ಮೀಟರ್ ಉದ್ದವಿದೆ.
ಎಲಿವೇಟೆಡ್ ಕಾರಿಡಾರ್ ಯೋಜನೆಯಾಗಿ ರನ್ ವೇಗೆ ಮೀಸಲಾಗಿದ್ದ ಜಾಗವನ್ನು ಬಿಟ್ಟುಕೊಡಲಾಗಿತ್ತು. ಆದರೆ, ನಂತರ ಹೆಚ್ಚುವರಿ ಮೂರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಮೂಲ ಪ್ರಸ್ತಾವಿತ ಯೋಜನೆಯಂತೆ ರನ್ ವೇ ನಿರ್ಮಿಸಲಾಗಿದೆ.
ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಈಗಾಗಲೇ 40 ವಿದ್ಯಾರ್ಥಿಗಳಿದ್ದಾರೆ. ಶೀಘ್ರದಲ್ಲೇ ಹೊಸ ಬ್ಯಾಚ್ ದಾಖಲಾತಿಗೆ ನೋಟಿಫಿಕೇಷನ್ ಹೊರಡಿಸಲಿದೆ. ಡಿಸೆಂಬರ್‌ನಲ್ಲಿ ತರಗತಿಗಳು ಆರಂಭವಾಗಲಿವೆ ಎಂದು ಸಚಿವ ನಾರಾಯಣಗೌಡರ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.