ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ವಿವಾದ ಬಿಜೆಪಿ ಸುತ್ತ ಸುತ್ತಿಕೊಳ್ಳುತ್ತಿರುವ ನಡುವೆ ಮಾಜಿ ಮುಖ್ಯಮಂತ್ರಿಗಳಿಬ್ಬರು ಸಭೆ ನಡೆಸಿದ್ದು, ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ದೆಹಲಿ ಪ್ರವಾಸದಿಂದ ವಾಪಸ್ಸಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾವೇರಿ ನಿವಾಸಕ್ಕೆ ಆಗಮಿಸಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಎಸ್‌ವೈ ಮದುವೆ ಕಾರ್ಯವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ಹಿನ್ನೆಲೆಯಲ್ಲಿ ಕಾವೇರಿ ಆವರಣದಲ್ಲಿ ಬಿಎಸ್‌ವೈ ಕಾರಿನಲ್ಲೇ ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದರು.
ದೆಹಲಿಯಲ್ಲಿ ಹೈಕಮಾಂಡ್‌ನ ಯಾವುದೇ ನಾಯಕರನ್ನು ಶೆಟ್ಟರ್ ಭೇಟಿಯಾಗಿಲ್ಲ. ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳಿದ್ದರು ಎನ್ನಲಾಗಿದ್ದು, ಪರಿಷತ್ ಚುನಾವಣೆ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಹೋದರ ಪ್ರದೀಪ್ ಶೆಟ್ಟರ್ ಮತ್ತೊಮ್ಮೆ ಸ್ಪರ್ಧೆಗಿಳಿಯಲು ಬಿಜೆಪಿ ಸಮ್ಮತಿಸಿದ್ದು, ಈ ಸಂಬಂಧ ಬಿಎಸ್‌ವೈ ಜೊತೆ ಮಾತುಕತೆ ನಡೆಸಿ ಸಹಕಾರ ಕೋರಿದ್ದಾರೆ ಅಂತಲೂ ಹೇಳಲಾಗ್ತಿದೆ.
ಬಿಟ್ ಕಾಯಿನ್ ಹಗರಣ ಪ್ರಕರಣದಿಂದ ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ ಎನ್ನುವ ಮಾತುಗಳು ಹರಿದಾಡುತ್ತಿದ್ದು, ಒಂದು ವೇಳೆ ಅಂತಹ ಸನ್ನಿವೇಶ ಎದುರಾದಲ್ಲಿ ಮುಂದೇನು ಎನ್ನುವ ಆಲೋಚನೆ ಕೇಸರಿ ಪಡೆಯಲ್ಲಿ ಶುರುವಾಗಿದೆ. ಹೀಗಾಗಿ ನಿನ್ನೆ ಬಿಎಸ್‌ವೈ ಹಾಗೂ ಶೆಟ್ಟರ್ ಭೇಟಿ ರಾಜ್ಯ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.