ಬೆಂಗಳೂರು: ದಿನೇಶ್ ಗುಂಡುರಾವ್ ಬಳಿಕ ಮಾಜಿ ಡಿ.ಸಿಎಂ ಪರಮೇಶ್ವರ್ ಅವರನ್ನ ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಮುನಿಯಪ್ಪ, ಪರಮೇಶ್ವರ್ರನ್ನ ಭೇಟಿಯಾಗಿ ಮಾತನಾಡಿದ್ದೇನೆ. ಒಂದು ದಲಿತರ ಸಂಸ್ಥೆ ಮೇಲೆ ಈ ರೀತಿ ದಾಳಿ ಸರಿಯಲ್ಲ, ಕೇಂದ್ರ ಸರಕಾರ ತಪ್ಪು ಮಾಡುತ್ತಿದೆ. ದಲಿತರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ದೂರಿದರು.
ಪರಮೇಶ್ವರ್ ಮೇಲಿನ ಐಟಿ ದಾಳಿ ಬಗ್ಗೆ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯೆ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅವರ ತಂದೆ ಗಂಗಾಧರಯ್ಯ ದಲಿತರಿಗಾಗಿ ಕಟ್ಟಿದ ಸಂಸ್ಥೆ, ಅದರಲ್ಲೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಬಹಳ ಕಷ್ಟ ಪಟ್ಟು ಸೇವಾ ಮನೋಭಾವದಿಂದ ಕಟ್ಟಿದ್ದಾರೆ ಅಂದರೆ ಅದನ್ನೂ ನೀವು ಸಹಿಸುವುದಿಲ್ಲ. ಯುಪಿಎ ಸರ್ಕಾರ ಕೂಡ ಆಡಳಿತ ನಡೆಸಿದೆ. ಆದರೆ ಇಂತಹ ಕೆಟ್ಟ ತೀರ್ಮಾನ ಯಾವತ್ತು ತೆಗೆದುಕೊಂಡಿಲ್ಲ. ಹುಡುಕಿ ಹುಡುಕಿ ಕಾಂಗ್ರೆಸ್ ಮುಖಂಡರಿರುವ ಸಂಸ್ಥೆಗೆ ಐಟಿ ಕೈ ಹಾಕುತ್ತಿದೆ, ಇದು ಆರೋಗ್ಯಕರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಂ ಸಹೋದರ, ಸಿದ್ಧಾರ್ಥ್ ಶಿಕ್ಷಣ ಸಂಸ್ಥೆ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಪರಮೇಶ್ವರ್ರನ್ನ ನೇರವಾಗಿ ಸಂಪರ್ಕ ಮಾಡಿ ದಾಳಿ ಮಾಡಿರೋದು ಸರಿಯಲ್ಲ. ಇದು ಜನವಿರೋಧಿ, ರಾಜಕೀಯ ದ್ವೇಷದ ತೀರ್ಮಾನ. ಜನ ಸಹಿಸುವುದಿಲ್ಲ, ರೊಚ್ಚಿಗೇಳ್ತಾರೆ. ಕಾನೂನು ಎಲ್ಲವನ್ನೂ ನೋಡಿಕೊಳ್ಳತ್ತೆ ಎಂದರು.
ಹಾಗೆ ಕಲಾಪದಲ್ಲಿ ಮಾಧ್ಯಮ ನಿರ್ಬಂಧ ವಿಚಾರ ಮಾತನಾಡಿದ ಮುನಿಯಪ್ಪ, ಇದು ನಿಜಕ್ಕೂ ದುರ್ದೈವದ ಸಂಗತಿ. ಮೀಡಿಯಾ ಒಳಗೆ ಬಿಡೋದ್ರಿಂದ ಗಲಾಟೆ ಕಡಿಮೆಯಾಗತ್ತೆ, ಆಗ ಆರೋಗ್ಯಕರ ಚರ್ಚೆ ನಡೆಯಲು ಸಾಧ್ಯ. ಮೋದಿ, ಶಾ ಮಾಧ್ಯಮಗಳನ್ನ ನಿಯಂತ್ರಿಸುತ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ. ನಾನು 28 ವರ್ಷ ಪಾರ್ಲಿಮೆಂಟ್ನಲ್ಲಿ ಕೆಲಸ ಮಾಡಿದ್ದೇನೆ, ವಾಜಪೇಯಿ ಸರ್ಕಾರವನ್ನೂ ನೋಡಿದ್ದೇನೆ. ವಾಜಪೇಯಿ ಅವರು ಬಹಳ ದೊಡ್ಡ ನಾಯಕರು. ಇಂತಹ ಕೆಟ್ಟ ಕೆಲಸಕ್ಕೆ ಯಾವತ್ತು ಮುಂದಾಗಿರಲಿಲ್ಲ. ಅದು ನಿಜವಾದ ರಾಜಕೀಯ, ಈ ರೀತಿಯ ರಾಜಕೀಯ ನಾನು ಒಪ್ಪೋದಿಲ್ಲ ಎಂದರು.