ಬೆಂಗಳೂರು: ಸುಗಮ ಕಲಾಪ ನಡೆಸುವ ಸಲುವಾಗಿ ಸದಸ್ಯರಿಗೆ ನೀತಿ ಸಂಹಿತೆ ರೂಪಿಸಲು ಇದು ಸಕಾಲ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯುತ್ತಿರುವ ಮೂರು ದಿನಗಳ 82ನೇ ಅಖಿಲ ಭಾರತ ಪೀಠಸೀನಾಧಿಕಾರಿಗಳ ಸಮ್ಮೇಳನದಲ್ಲಿ ಸಂಸದೀಯ ವ್ಯವಸ್ಥೆ ಕುರಿತು ಎರಡು ವಿಷಯಗಳನ್ನು ಮಂಡಿಸಿ ಮಾತನಾಡಿದರು.
“ಶತಮಾನದ ಪಯಣ – ಮೌಲ್ಯಮಾಪನ ಮತ್ತು ಮುಂದಿನ ಹಾದಿ” ಕುರಿತು ವಿಚಾರ ಮಂಡಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಶಿಸ್ತು ಮತ್ತು ಸದಸ್ಯರು ಅಡ್ಡಿಪಡಿಸುವ ವರ್ತನೆಯಿಂದ ಹಲವು ಬಾರಿ ಸದನದ ನೈಜ ಉದ್ದೇಶವನ್ನು ಅಪಹರಣ ಮಾಡುವಂತಾಗುತ್ತದೆ. ಇದರ ಪರಿಣಾಮ ಕಲಾಪವನ್ನು ಬಲವಂತವಾಗಿ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
2008ರಲ್ಲಿ ನಡೆದ ಅಖಿಲ ಭಾರತ ಪೀಠಸೀನಾಧಿಕಾರಿಗಳ ಸಮ್ಮೇಳನದಲ್ಲಿ ಸದನದಲ್ಲಿ ಸದಸ್ಯರ ವರ್ತನೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ರೂಪಿಸುವ ಕುರಿತು ತೀರ್ಮಾನ ಕೈಗೊಂಡಿದ್ದನ್ನು ಸ್ಮರಿಸಿಕೊಂಡು, ಈ ನಿರ್ಣಯಗಳು ಇನ್ನೂ ಸಾಕಾರಗೊಂಡಿಲ್ಲ ಎಂದು ವಿಷಾದಿಸಿದರು.
ಪ್ರಜಾಸತ್ತಾತ್ಮಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವ ಮೂಲಕ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಗುಣಮಟ್ಟ ಹಾಗೂ ಘನತೆಯನ್ನು ಹೆಚ್ಚಿಸಲು, ಶಾಸನ ಸಭೆಗಳಲ್ಲಿ ಅಹಿತರ ಘಟನೆಗಳನ್ನು ಕೊನೆಗಾಣಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎರಡನೇ ವಿಷಯ “ಸಂವಿಧಾನ, ಸದನ ಮತ್ತು ಜನಪರವಾಗಿ ಸಭಾಧ್ಯಕ್ಷರ ಜವಾಬ್ದಾರಿ” ಕುರಿತು ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸನಸಭೆ ಮತ್ತು ಸಂಸತ್ತಿನಲ್ಲಿ ಶಿಸ್ತು, ವಿನಯ, ಘನತೆ ಮತ್ತು ಸದನದ ಗೌರವವನ್ನು ಕಾಪಾಡುವ ಜವಾಬ್ದಾರಿಯನ್ನು ಆಯಾ ಪಕ್ಷಗಳ ಮುಖಂಡರು ಮತ್ತು ಮುಖ್ಯ ಸಚೇತಕರು ಹೊರಬೇಕು ಎಂದರು.
ಹಾಲಿ ಇರುವ ಸದನ ಸಮಿತಿಗಳ ಕಾರ್ಯನಿರ್ವಹಣೆಯ ವ್ಯವಸ್ಥೆ, ಆಡಳಿತ, ಸರ್ಕಾರದ ನೀತಿ, ಮತ್ತು ಹಣ ಸದ್ಭಳಕೆ ಕುರಿತು ಪರಿಣಾಮಕಾರಿ ಸುಧಾರಣೆಗಳನ್ನು ತರುವ ಬಗ್ಗೆ ಮರು ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.ಇಂತಹ ಸಮ್ಮೇಳನಗಳಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಂಡರೂ ಸಹ ಉತ್ಸಾಹದಿಂದ ಅಕ್ಷರಶಃ ಇದನ್ನು ಜಾರಿಗೆ ತರಬೇಕು. ಇಂತಹ ಮಹತ್ವದ ನಿರ್ಧಾರಗಳನ್ನು ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಧಾನಮಂಡಲದ ಸಚಿವಾಲಯಕ್ಕೆ ಸ್ವಾಯತ್ತ ಸ್ಥಾನಮಾನ ಮತ್ತು ಹಣಕಾಸು ಸ್ವಾಯತ್ತತೆ ವಿಷಯ ಕುರಿತು ಪ್ರಸ್ತಾಪಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕ ವಿಧಾನಸಭೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪೂರ್ಣ ಪ್ರಮಾಣದ ಹಣಕಾಸು ಸ್ವಾಯತ್ತ ಸ್ಥಾನಮಾನವನ್ನು ಪಡೆಯಲು ಸಾಧ‍್ಯವಾಗಿಲ್ಲ. ಏಕೆಂದರೆ ಶಾಸಕಾಂಗ ಸಹ ಹಣಕಾಸು ಇಲಾಖೆಯ ಅಭಿಪ್ರಾಯ ಮತ್ತು ಒಪ್ಪಿಗೆ ಪಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ:ಬರೇ ಕಡತದಲ್ಲೇ ಉಳಿದ 'ಸುವರ್ಣಸೌಧ'ದ ಕಚೇರಿಗಳ ಸ್ಥಳಾಂತರ ಆದೇಶ: ಸದ್ಯದ ಸ್ಥಿತಿಗತಿ ಹೇಗಿದೆ?
ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿ.ಪಿ. ಜೋಷಿ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯಲ್ಲಿ ತಾವು ಕೂಡ ಸದಸ್ಯರಾಗಿದ್ದು, ಸಮಿತಿ ಸಲ್ಲಿಸಿರುವ ವರದಿಯನ್ನು ಈ ಸಮ್ಮೇಳನದ ಅಧ್ಯಕ್ಷರು ಪರಿಗಣಿಸಬೇಕು. ಈ ಸಮಿತಿ ವರದಿಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆಯೇ ಮತ್ತು ಕಾರ್ಯಗತಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ವರದಿ ವಿಧಾನಮಂಡಲದ ಸಚಿವಾಲಯದ ಆರ್ಥಿಕ ಸ್ವಾಯತ್ತತೆ ಕುರಿತು ವಿವರವಾದ ಮಾಹಿತಿ ಒಳಗೊಂಡಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.