ಬೆಂಗಳೂರು :ಬರೀ ಈಶ್ವರಪ್ಪ ಅಷ್ಟೇ ಅಲ್ಲ, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಆಗ್ತಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಈ ಹಿಂದೆ ಗವರ್ನರ್ಗೆ ಪತ್ರ ಬರೆದಿದ್ದರು. ಸಿಎಂ ಹಾಗೂ ಅವರ ಕುಟುಂಬ ನಮಗೆ ಗೊತ್ತಿಲ್ಲದೇ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಈಶ್ವರಪ್ಪ ದೂರು ನೀಡಿದ್ದರು. ಈಗ ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಪ್ರಿಯಾಂಕ್ ಖರ್ಗೆ.. ವಿಧಾನಸೌಧದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಕೇಳಿದ ಆರೋಪ ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಇದು 40 ಪರ್ಸೆಂಟ್ ಸರ್ಕಾರ. ನೀವು ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳಿದ್ದೀರಿ.. ಆದರೆ, ಕರ್ನಾಟಕದಲ್ಲಿ ಮೇಬಿ ಖಾವುಂಗಾ ತುಮ್ಕೋಬಿ ಖಿಲಾವೂಂಗಾ ನಡೀತಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರೂ, ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ನಡೆದಿಲ್ಲ ಎಂದರು.
ಇಲ್ಲಿ ವಿಧಾನಸಭೆಯಲ್ಲಿ ಆ ಬಗ್ಗೆ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೆ ಸ್ಪೀಕರ್ ಕೂಡ ಇದು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಚರ್ಚೆ ಅಲ್ಲ ಎಂದು ಹೇಳಿ, ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಿದ್ದಾರೆ. 40% ಸರ್ಕಾರ ಏನು ಆಗ್ತಿಲ್ಲ ಅಂತಾ ಹೇಳ್ತಿದ್ದಾರೆ. ಆದರೆ, ಚರ್ಚೆಗೆ ಹೆದರುತ್ತಿದ್ದಾರೆ. ಅದರಲ್ಲೂ ವಿಶೇಷ ಎಂದರೆ ಸರ್ಕಾರ ಇದಕ್ಕೆ ಪ್ರೂಪ್ ಕೇಳುತ್ತಿದೆ ಎಂದು ಕಿಡಿಕಾರಿದರು.
ಈ ರೀತಿ ಆರೋಪ ಮಾಡುತ್ತಿರುವುದು ಒಂದು ರಾಜ್ಯ ಸರ್ಕಾರದ ಅಧಿಕೃತವಾದ ಗುತ್ತಿಗೆದಾರರ ಅಸೋಸಿಯೇಶನ್. ಈ ಅಸೋಸಿಯೇಶನ್ನಲ್ಲಿರುವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುತ್ತಾರೆ. ಸರ್ಕಾರವೇ ಇವರಿಗೆ ಬಿಲ್ ಕೊಡುತ್ತದೆ. ಇವರೊಳಗೆ ನಡೆಯುವ ವ್ಯವಹಾರಗಳಿಗೆ ನಾವು ಪ್ರೂಫ್ ಕೊಡುವಂತೆ ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಚರ್ಚೆಗೆ ಹೆದರುವುದು ನೋಡಿದರೆ ಕೇವಲ ಈಶ್ವರಪ್ಪನವರು ಮಾತ್ರವಲ್ಲ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಿಗಿದೆ ಎನಿಸುತ್ತದೆ ಎಂದು ಹೇಳಿದರು.