ಬೆಂಗಳೂರು :ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ-2012ರಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಈ ಕುರಿತು ಸಂತ್ರಸ್ತ ಮಗುವಿನ ಪೋಷಕರಿಗೆ ಮಾಹಿತಿ ನೀಡಬೇಕು ಹಾಗೂ ಅವರ ವಾದವನ್ನು ಆಲಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಕುರಿತಂತೆ ಬೆಂಗಳೂರಿನ ಮೂವರು ಸಂತ್ರಸ್ತ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ಧ ವಿಭಾಗೀಯ ಪೀಠ, ಸಂತ್ರಸ್ತ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಹಲವು ನಿರ್ದೇಶನಗಳನ್ನು ನೀಡಿದೆ.
ಪೀಠ ತನ್ನ ಸರಣಿ ನಿರ್ದೇಶನಗಳಲ್ಲಿ, ಪೋಕ್ಸೋ ಪ್ರಕರಣಗಳಲ್ಲಿ ಆರೋಪ ಸಾಬೀತು ಪಡಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಆದರೆ, ಅಭಿಯೋಜನಾ ವ್ಯವಸ್ಥೆ ಈಗಾಗಲೇ ಅಧಿಕ ಭಾರದಿಂದ ನಲುಗುತ್ತಿದೆ. ಸಂತ್ರಸ್ತ ಮಗು ಹಾಗೂ ದೂರುದಾರರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಭಿಯೋಜಕರಿಗೆ ಅಗತ್ಯ ನೆರವು ನೀಡಬೇಕಾಗುತ್ತದೆ.
ಆದರೆ, ಸಂತ್ರಸ್ತರಿಗೆ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ, ವಿಶೇಷ ನ್ಯಾಯಾಲಯಗಳು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಾಗ ಸಂತ್ರಸ್ತ ಕುಟುಂಬಕ್ಕೆ, ಪೋಷಕರಿಗೆ ಅಥವಾ ಅವರ ವಕೀಲರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ನಿರ್ದೇಶನಗಳು :
* ಪೋಕ್ಸೋ ಪ್ರಕರಣದಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಾಗ ತನಿಖಾಧಿಕಾರಿಯು ಸಂತ್ರಸ್ತರ ಕುಟುಂಬ, ಪೋಷಕರು ಅಥವಾ ಪಾಲಕರು ಹಾಗೂ ಅಭಿಯೋಜಕರಿಗೆ ಮಾಹಿತಿ ನೀಡಬೇಕು.