ಬೆಂಗಳೂರು : ರಾಜ್ಯದಲ್ಲಿ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ 2007ರ ಸಮರ್ಪಕ ಜಾರಿಗೆ ಮೇ 27ರಂದು ನೀಡಿದ್ದ ಆದೇಶ ಪಾಲಿಸದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಪ್ಟೆಂಬರ್ 6ರಂದು ಖುದ್ದು ವಿಡಿಯೋ ಕಾನರೆನ್ಸ್ ಮೂಲಕ ಹಾಜರಾಗಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿದೆ.
ಈ ಕುರಿತು ಬೆಂಗಳೂರಿನ ಪವನ್ ಕುಮಾರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಈ ವೇಳೆ ಹಿಂದಿನ ಆದೇಶದ ಕುರಿತು ಪ್ರಸ್ತಾಪಿಸಿದ ಪೀಠ, ಕಳೆದ ಮೇ 27ರಂದು ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಹಾಗೂ ನಿರ್ವಹಣಾ ಕಾಯ್ದೆ 2007ನ್ನು ರಾಜ್ಯದಲ್ಲಿ ಜಾರಿಗೊಳಿಸುವ ಸಂಬಂಧ ಹಲವು ನಿರ್ದೇಶನಗಳನ್ನು ನೀಡಲಾಗಿತ್ತು, ಅವುಗಳನ್ನು ಜಾರಿಗೊಳಿಸಿದೆಯೇ ಎಂದು ಪ್ರಶ್ನಿಸಿತು.
ಇದಕ್ಕೆ ಸರ್ಕಾರದ ಪರ ವಕೀಲರು ಉತ್ತರಿಸಿ, ಇನ್ನೂ ಸ್ವಲ್ಪ ಕಾಲಾವಕಾಶಬೇಕು ಎಂದು ಕೋರಿದರು. ಸರ್ಕಾರದ ಈ ನಡವಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ಮೇ 27ರಂದು ಆದೇಶ ನೀಡಿ ಜುಲೈ 7ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಜುಲೈ 7ರಂದು ಸರ್ಕಾರಿ ವಕೀಲರು ಕಾಲಾವಕಾಶ ಪಡೆದಿದ್ದರು. ಆಗಲೇ ಕೊನೆಯ ಅವಕಾಶ ಎಂದು ಹೇಳಲಾಗಿತ್ತು. ಆದರೂ ಏನೂ ಕ್ರಮ ಕೈಗೊಳ್ಳದಿರುವುದು ಸರಿಯಾದ ನಡವಳಿಕೆಯಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ, ಆದೇಶ ಪಾಲನೆ ಮಾಡುವಲ್ಲಿ ವಿಫಲವಾಗಿರುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಪ್ಟೆಂಬರ್ 6ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾಗಿ ವಿವರಣೆ ನೀಡಬೇಕೆಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಮೇ 27ರಂದು ರಾಜ್ಯದಲ್ಲಿ 2007ರ ಹಿರಿಯ ನಾಗರಿಕರ ಕಾಯ್ದೆ ಜಾರಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದ ಪೀಠ, ಸರ್ಕಾರ ಅಗತ್ಯಕ್ಕೆ ತಕ್ಕಷ್ಟು ವೃದ್ಧಾಶ್ರಮಗಳನ್ನು ತೆರೆದಿಲ್ಲ, ಕೆಲವು ಸರ್ಕಾರೇತರ ಸಂಸ್ಥೆಗಳಿಗೆ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಆರ್ಥಿಕ ನೆರವು ನೀಡುತ್ತಿದೆ. ಆದೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಪ್ರತಿಯೊಂದು ಜಿಲ್ಲೆಯಲ್ಲೂ ವೃದ್ಧಾಶ್ರಮಗಳನ್ನು ತೆರೆಯಬೇಕು. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಿತ್ತು.