ಕರ್ನಾಟಕ

karnataka

ETV Bharat / city

ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರ ನಾಗರಿಕ ಹಕ್ಕು ನಿರ್ದೇಶನಾಲಯಕ್ಕೆ ಬೇಡ; ಸಿಎಂಗೆ ಸಿದ್ದು ಪತ್ರ - ಜಾತಿ ಸಿಂಧುತ್ವ ಪ್ರಮಾಣ ಪತ್ರ ಕುರಿತು ಸಿದ್ದರಾಮಯ್ಯ ಪತ್ರ

ಈ ಕೂಡಲೇ ಈ ಜಾತಿ, ವರ್ಗಗಳ ಹಿತಾಸಕ್ತಿಯನ್ನು ಕಾಪಾಡಬೇಕಾದ ಸರ್ಕಾರ ಮತ್ತು ಸರ್ಕಾರದಲ್ಲಿನ ಸಚಿವರುಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅವೈಜ್ಞಾನಿಕವಾದ ಮತ್ತು ಅಮಾಯಕರಿಗೆ ಕಿರುಕುಳ ನೀಡುವ ಈ ಸರ್ಕಾರಿ ಆದೇಶವನ್ನು ತಕ್ಷಣದಿಂದಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.

issue-of-caste-validity-certificate-siddaramaiah-wrote-letter-to-yadiyurappa
ಸಿಎಂಗೆ ಸಿದ್ದು ಪತ್ರ

By

Published : Feb 6, 2021, 4:02 PM IST

ಬೆಂಗಳೂರು: ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವಹಿಸಿರುವ ಸರ್ಕಾರದ ನಿರ್ಧಾರ ವಾಪಸ್​ಗೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಸಿಎಂ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯರ ಪತ್ರ

ಪತ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿ ರಕ್ಷಿಸುವವರು ಇಲ್ಲದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಆಳವಾಗಿ ಬೇರೂರುತ್ತಿದೆ. ಇದಕ್ಕೆ ಪೂರಕವೆಂಬಂತೆ ಜ.16 ರಂದು ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹೊರಡಿಸಿರುವ ಆದೇಶವೇ ಸಾಕ್ಷಿಯಾಗಿದೆ.

ಸಿಎಂ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯರ ಪತ್ರ

ಈ ಆದೇಶದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ನಿಯಮಗಳು 1992 ರ ಪ್ರಕಾರ ಸರ್ಕಾರದ ಇಲಾಖೆಗಳಿಗೆ, ಸಂಸ್ಥೆಗಳಿಗೆ ನೌಕರರಾಗಿ ಆಯ್ಕೆಯಾದ ಸಂದರ್ಭಗಳಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಅಧಿಕಾರ ನೀಡಲಾಗಿತ್ತು ಎಂದು ವಿವರಿಸಿದ್ದಾರೆ.

ಸಿಎಂ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯರ ಪತ್ರ

ಈಗ ಕೆಲವು ನಿರ್ದಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತ ಕೋಶ) ದಿಂದ ವರದಿ ಪಡೆದು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡತಕ್ಕದ್ದು ಎಂದು ಜಿಲ್ಲಾ ಸಮಿತಿಗೆ ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಕೆಳಕಂಡ ಜಾತಿಗಳನ್ನು ನಮೂದಿಸಲಾಗಿದೆ.

ಕರ್ನಾಟಕ ಪರಿಶಿಷ್ಟ ಪಂಗಡದಲ್ಲಿರುವ ಜಾತಿ ಮತ್ತು ಅವುಗಳ ಕ್ರಮ ಸಂಖ್ಯೆ

  • 1- ಗೊಂಡ, ರಾಜಗೊಂಡ, ನಾಯಕ್‍ಪೋಡ್
  • 15- ಜೇನು ಕುರುಬ
  • 16- ಕಾಡು ಕುರುಬ
  • 17- ಕಮ್ಮಾರ (ದಕ್ಷಿಣ ಕನ್ನಡ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ)
  • 18- ಕಣಿಯನ್, ಕಣ್ಯನ್ (ಕೊಳ್ಳೇಗಾಲ)
  • 21- ಕೊಂಕಣ, ಕೊಂಕಣಿ, ಕುಕನ
  • 22- ಕೋಲಿಧೋರ್, ಟೋಕ್ರೆ ಕೇಳಿ, ಕೊಲ್ಚ, ಕೊಲಘ
  • 28- ಕುರುಬ (ಕೊಡಗು ಜಿಲ್ಲೆ)
  • 34- ಮಾಲೇರು
  • 35- ಮರಾಠ (ಕೊಡಗು ಜಿಲ್ಲೆ)
  • 36- ಮರಾಠಿ (ದಕ್ಷಿಣ ಕನ್ನಡ ಜಿಲ್ಲೆ)
  • 37- ಪರಿವಾರ, ತಳವಾರ

ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿ ಮತ್ತು ಅವುಗಳ ಕ್ರಮ ಸಂಖ್ಯೆ

  • 19- ಬೇಡ ಜಂಗಮ, ಬುಡ್ಗ ಜಂಗಮ
  • 20- ಬೋವಿ
  • 21- ಚನ್ನ ದಾಸರ್
  • 41- ಹಂದಿ ಜೋಗಿ
  • 55- ಕೋಟೆಗಾರ್, ಮೇತ್ರಿ
  • 78- ಮೊಗೇರ್


ಪರಿಶಿಷ್ಟ ವರ್ಗದ ಜಾತಿಗಳಲ್ಲಿ 21 ಜಾತಿಗಳನ್ನು, ಪರಿಶಿಷ್ಟ ಜಾತಿಯಲ್ಲಿ 8 ಜಾತಿಗಳನ್ನು ಗುರಿಯಾಗಿಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ. ಆದರೆ ಈ ಆದೇಶ ಹೊರಡಿಸಲು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶದಲ್ಲಿ ಈ 29 ಜಾತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಜಾಗೃತ ಕೋಶದವರು ಪರಿಶೀಲನೆ ಮಾಡಬೇಕೆಂದು ಖಂಡಿತ ಹೇಳಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ತಪ್ಪು ವ್ಯಾಖ್ಯಾನ ಮಾಡಿ ಕೆಲವೇ ಜಾತಿಗಳನ್ನು ಗುರಿಯಾಗಿಸಿಕೊಂಡು ಈ ಸರ್ಕಾರ ಆದೇಶವನ್ನು ಹೊರಡಿಸಿದೆ ಎಂದಿದ್ದಾರೆ.

ವಿಚಾರಣೆಗಾಗಿ ಬಾಕಿ ಇವೆ

ನಾಗರಿಕ ಹಕ್ಕು ಜಾತಿ ನಿರ್ದೇಶನಾಲಯ (ಜಾಗೃತ ಕೋಶ) ಮುಂದೆ ಹಲವು ವರ್ಷಗಳಿಂದ ಅಸಂಖ್ಯಾತ ಪ್ರಕರಣಗಳು ತನಿಖೆ ಮತ್ತು ವಿಚಾರಣೆಗಾಗಿ ಬಾಕಿ ಇವೆ. ಅವುಗಳನ್ನು ಇತ್ಯರ್ಥಪಡಿಸದೆ ಇಲ್ಲಿನ ಅಧಿಕಾರಿಗಳು ಕೂತಿದ್ದಾರೆ. ಇಂತಹ ಇಲಾಖೆಗೆ ಸರ್ಕಾರದ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಜಾತಿಯ ಕುರಿತಾದ ವಿವರಗಳನ್ನು ನಿರ್ದಿಷ್ಟ ಅವಧಿಯಲ್ಲಿ ತನಿಖೆ ಮಾಡಿ ಸಲ್ಲಿಸಲು ಸಾಧ್ಯವಿದೆಯೆ? ಮೇಲಿನ ಸಮುದಾಯಗಳ ಅಭ್ಯರ್ಥಿಗಳಿಗೆ ಕಿರುಕುಳ ನೀಡಲು, ತೀವ್ರ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲು ಮಾಡಿದ ಆದೇಶ ಇದಾಗಿದೆ.

ಇಂತಹ ಸಂದರ್ಭದಲ್ಲಿ ಈ ವರ್ಗಗಳ, ಜಾತಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾದ ಸಚಿವರುಗಳು ಮೌನವಾಗಿರುವುದು ವಿಷಾದನೀಯ. ಇದೇ ವರ್ಗವನ್ನು ಪ್ರತಿನಿಧಿಸುವ ಸಮಾಜ ಕಲ್ಯಾಣ ಸಚಿವರು ಈ ಆದೇಶ ಹೊರಡಿಸಲು ಅನುಮೋದನೆ ನೀಡಿರುವುದನ್ನು ನೋಡಿದರೆ ಈ ವರ್ಗಗಳ ಕುರಿತಂತೆ ಅವರ ಕಾಳಜಿ ಎಂಥದ್ದು ಎಂದು ಅರ್ಥವಾಗುತ್ತದೆ.

ಆದುದರಿಂದ, ಈ ಕೂಡಲೇ ಈ ಜಾತಿ, ವರ್ಗಗಳ ಹಿತಾಸಕ್ತಿಯನ್ನು ಕಾಪಾಡಬೇಕಾದ ಸರ್ಕಾರ ಮತ್ತು ಸರ್ಕಾರದಲ್ಲಿನ ಸಚಿವರುಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅವೈಜ್ಞಾನಿಕವಾದ ಮತ್ತು ಅಮಾಯಕರಿಗೆ ಕಿರುಕುಳ ನೀಡುವ ಈ ಸರ್ಕಾರಿ ಆದೇಶವನ್ನು ತಕ್ಷಣದಿಂದಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details