ಬೆಂಗಳೂರು: ಇಸ್ರೇಲ್ ದೇಶದ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಉನ್ನತ ನಿಯೋಗವು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮ ಕಾರ್ಯ ಪರಿಸರ ಕುರಿತು ಚರ್ಚೆ ನಡೆಸಿದೆ. ಬುಧವಾರ ವಿಕಾಸಸೌಧದಲ್ಲಿ ನಡೆದ ಭೇಟಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ ಐಟಿ, ಬಿಟಿ, ಸ್ಟಾರ್ಟಪ್ ಮತ್ತು ರಕ್ಷಣಾ ಸಂಶೋಧನೆ ಹಾಗೂ ತಂತ್ರಜ್ಞಾನದ ಕುರಿತು ಹಲವು ವಿಚಾರಗಳನ್ನು ಇಸ್ರೇಲ್ ನ ನಿಯೋಗದೊಂದಿಗೆ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು, ಇತ್ತೀಚೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಇಸ್ರೇಲಿನ ಪ್ರಧಾನಿಗಳು ಮಾತನಾಡಿದ್ದನ್ನು ನೆನಪಿಸಿಕೊಂಡರು. ಇದೇ ವೇಳೆ ಇಸ್ರೇಲ್ ನಿಯೋಗದ ಸದಸ್ಯರು, ತಮ್ಮ ದೇಶದಲ್ಲಿರುವ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧಗಳು, ವಿಶ್ವಸಂಸ್ಥೆ, ಯೂರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೋ ಮುಂತಾದ ವಿಷಯಗಳನ್ನು ಕುರಿತು ಹೇಗೆ ಕಲಿಸಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ನವೋದ್ಯಮದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗವು, ರಾಜ್ಯಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ ಅವರು, ರಾಜ್ಯದಲ್ಲಿ ನವೋದ್ಯಮವು ಶಕ್ತಿಶಾಲಿಯಾಗಿ ಬೆಳೆಯುತ್ತಿರುವುದನ್ನು ಇಲ್ಲಿನ 34ಕ್ಕೂ ಹೆಚ್ಚಿನ ಸ್ಟಾರ್ಟಪ್ ಕಂಪನಿಗಳು ಯೂನಿಕಾರ್ನ್ ಸ್ಥಾನಮಾನ ಹೊಂದಿರುವುದನ್ನು ಇಸ್ರೇಲ್ ನಿಯೋಗದ ಗಮನಕ್ಕೆ ತಂದರು.