ಬೆಂಗಳೂರು: ಐಟಿ-ಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಮಾಣ ತಗ್ಗಿಸಲು ಹಾಗೂ ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ಬೈಕ್ ಸವಾರರಿಗೆ ಹಾಫ್ ಹೆಲ್ಮೆಟ್ ಬದಲಿಗೆ ಐಎಸ್ಐ ಮಾರ್ಕ್ ವಿರುವ ಫುಲ್ ಹೆಲ್ಮೆಟ್ ಧರಿಸುವಂತೆ ಕಳೆದ ಒಂದು ತಿಂಗಳಿನಿಂದ ಜಾಗೃತಿ ಮೂಡಿಸುತ್ತಿದ್ದಾರೆ.
ರಾಜಧಾನಿಯ ಪ್ರಮುಖ ರಸ್ತೆ, ಜಂಕ್ಷನ್ ಸೇರಿದಂತೆ ನಗರದೆಲ್ಲೆಡೆ ಅರ್ಧ ಹೆಲ್ಮೆಟ್ ಧರಿಸುವ ವಾಹನ ಸವಾರರನ್ನು ತಡೆದು ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವಂತೆ ಪೊಲೀಸರು ತಿಳುವಳಿಕೆ ಮೂಡಿಸುತ್ತಿದ್ದಾರೆ. ಇದರ ಪರಿಣಾಮ ಐಎಸ್ಐ ಮಾರ್ಕ್ ಹೆಲ್ಮೆಟ್ಗೆ ಭಾರೀ ಡಿಮ್ಯಾಂಡ್ ಬಂದಿದೆ. ಟ್ರಾಫಿಕ್ ಪೊಲೀಸರ ಜಾಗೃತಿ ಬಳಿಕ ಸವಾರರು ಎಚ್ಚೆತ್ತುಕೊಂಡು ಹೆಲ್ಮೆಟ್ ಅಂಗಡಿಗಳಿಗೆ ಲಗ್ಗೆ ಹಾಕ್ತಿದ್ದಾರೆ . ಹೀಗಾಗಿ, ಹೆಲ್ಮೆಟ್ ಮಾರಾಟದಲ್ಲಿ ಸುಧಾರಣೆ ಕಂಡು ಬಂದಿದ್ದು ಶೇ.10ರಷ್ಟು ಹೆಚ್ಚಳವಾಗಿದೆ.
ಪ್ರತಿ ವರ್ಷ ನಗರದಲ್ಲಿ ನೂರಾರು ಬೈಕ್ ಅಪಘಾತ ಪ್ರಕರಣಗಳ ಬಗ್ಗೆ ವರದಿಯಾಗುತ್ತಿವೆ. ಇದರಲ್ಲಿ ಹೆಲ್ಮೆಟ್ ಧರಿಸದೆ ಮಾರಣಾಂತಿಕ ಗಾಯ ಹಾಗೂ ಸಾವುಗಳಿಗೆ ಬೈಕ್ ಸವಾರರು ಕಾರಣರಾಗುತ್ತಿದ್ದಾರೆ. 2021ರಲ್ಲಿ 618 ಬೈಕ್ ಅಪಘಾತ ಪ್ರಕರಣಗಳಲ್ಲಿ 651 ಜನರು ಮೃತಪಟ್ಟಿದ್ದರು. ಈ ಪೈಕಿ ಹೆಲ್ಮೆಟ್ ಧರಿಸಿಕೊಳ್ಳದೆ 57 ಸವಾರರು ಮೃತಪಟ್ಟಿದ್ದರು.ಆಶ್ಚರ್ಯಕರ ವಿಷ್ಯವೆಂದರೆ ಕಳೆದ ವರ್ಷ ಹೆಲ್ಮೆಟ್ ಧರಿಸಿ ಹಾಗೂ ಹೆಲ್ಮೆಟ್ ಧರಿಸದ ಅಪರಾಧ ಪ್ರಕರಣಗಳಿಗೆ ಹೋಲಿಸಿದಾಗ ಹೆಲ್ಮೆಟ್ ಧರಿಸಿದ ಸವಾರರೇ ಸಾವು-ನೋವುಗಳಿಗೆ ತುತ್ತಾಗಿರುವುದು ಹೆಚ್ಚಾಗಿ ಕಂಡು ಬಂದಿತ್ತು. ಗುಣಮಟ್ಟದ ಹೆಲ್ಮೆಟ್ ಕೊರತೆ, ಹಾಫ್ ಹೆಲ್ಮೆಟ್ ಅಪಘಾತಗಳಿಗೆ ಪ್ರಮುಖ ಕಾರಣವಾಗಿತ್ತು. ಕಳೆದ ಒಂದೂವರೆ ತಿಂಗಳಿಂದ ಟ್ರಾಫಿಕ್ ಪೊಲೀಸರು ಹಾಫ್ ಹೆಲ್ಮೆಟ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಐಎಸ್ಎ ಮಾರ್ಕ್ ಇರುವ ಹೆಲ್ಮೆಟ್ ಖರೀದಿಗೆ ಮುಂದಾಗುತ್ತಿದ್ದಾರೆ.
ಬೆಳಗಾವಿ ಮೂಲದ ಹೆಲ್ಮೆಟ್ ತಯಾರಿಸುವ ವೇಗ ಕಂಪೆನಿ, ಹರಿಯಾಣದ ಫರೀದಾಬಾದ್, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದಿಂದ ಬರುವ ಸ್ಟಡ್ಜ್ ಹಾಗೂ ಸ್ಟೀಲ್ ಬರ್ಡ್ ಕಂಪೆನಿಗಳ ಹೆಲ್ಮೆಟ್ಗಳೇ ರಾಜಧಾನಿಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಐಎಸ್ಐ ಮಾರ್ಕ್ ಇರುವ ರೂ. 500ರಿಂದ 600 ರೂ. ಆರಂಭವಾಗುವ ಹೆಲ್ಮೆಟ್ ದರ 2 ಸಾವಿರದವರೆಗೂ ಸಿಗಲಿದೆ. ಐಎಸ್ಐ ಗುರುತಿರುವ ಹೆಲ್ಮೆಟ್ಗಳ ಗುಣಮಟ್ಟಕ್ಕೆ ತಕ್ಕಂತೆ ಡಿಮ್ಯಾಂಡ್ ಹೆಚ್ಚಾಗಿದೆ. ಅಲ್ಲದೆ ಹೆಲ್ಮೆಟ್ ದರದಲ್ಲಿ ಕಂಪೆನಿಗಳು ಹೆಚ್ಚಳ ಮಾಡಿವೆ ಎಂಬ ಆಪಾದನೆ ಸಾರ್ವಜನಿಕರಿಂದ ಕೇಳಿಬಂದಿತ್ತು.