ಬೆಂಗಳೂರು:ಮೈಸೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ದಿಢೀರ್ ತಮ್ಮ ನಿರ್ಧಾರ ಬದಲಿಸಿ ತವರು ಜಿಲ್ಲೆ ಶಿವಮೊಗ್ಗದತ್ತ ಪ್ರಯಾಣಿಸುತ್ತಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಅವರ ಆಪ್ತವಲಯಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗಾಗಿ ಮೈಸೂರಿನಿಂದ ಬೆಂಗಳೂರು ಕಡೆ ತರಾತುರಿಯಲ್ಲಿ ಹೊರಟಿದ್ದ ಸಚಿವ ಈಶ್ವರಪ್ಪ, ನಂತರ ಮಾರ್ಗ ಬದಲಿಸಿ ಶ್ರೀರಂಗಪಟ್ಟಣ, ಹಿರಿಸಾವೆ ಮೂಲಕ ಶಿವಮೊಗ್ಗ ಕಡೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸ್ವ ಕ್ಷೇತ್ರವಾದ ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಟಿ ನಡೆಸಿ, ತಮ್ಮ ವಿರುದ್ಧದ ಆರೋಪದ ಕುರಿತು ಸಮಗ್ರವಾದ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಬೇಕಿದ್ದ ಸಚಿವ ಈಶ್ವರಪ್ಪ ಅಂತಿಮ ಕ್ಷಣದಲ್ಲಿ ತಮ್ಮ ನಿಲುವು ಬದಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಭೇಟಿ ಮಾಡಿ ರಾಜೀನಾಮೆ ಕುರಿತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈಗ ಈಶ್ವರಪ್ಪ ಅವರು ಸಿಎಂ ಭೇಟಿಗೆ ಆಗಮಿಸದೇ ಇರುವುದು ಕುತೂಹಲ ಮೂಡಿಸಿದೆ. ಸದ್ಯ ಕಾಂಗ್ರೆಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದೆಯಲ್ಲದೆ, ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಿದೆ.