ಬೆಂಗಳೂರು: ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ಮಟ್ಟದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದೆ. ರಾಜ್ಯ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನ ತೀವ್ರ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಈಟಿವಿ ಭಾರತ್ ಪ್ರತಿನಿಧಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ಮರಣ ಪ್ರಮಾಣವೂ ಏರುತ್ತಿದ್ದು, ಲಾಕ್ಡೌನ್ ಘೋಷಣೆಯಾಗಿ 135 ದಿನ ಕಳೆದು ಹೋಗಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸಮಸ್ಯೆ ಹೆಚ್ಚಾಗಲು ಕಾರಣ. ಕೋವಿಡ್ ನಿಯಂತ್ರಣ ಕೈತಪ್ಪಿ ಹೋಗಿದೆ ಸರ್ಕಾರ ಕೈಚೆಲ್ಲಿ ಕುಳಿತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಿನ ಬೆಳಗಾದರೆ ಸಾಕು ಸಾಕಷ್ಟು ಅಮಾನವೀಯ ದೃಶ್ಯವನ್ನು ರಾಜ್ಯದಲ್ಲಿ ಕಾಣುತ್ತಿದ್ದೇವೆ. ಕೆಲವರು ಬೆಡ್ ಸಿಕ್ಕಿಲ್ಲ ಅಂತ, ಮತ್ತೆ ಕೆಲವರು ಆಂಬುಲೆನ್ಸ್ ಸಿಕ್ಕಿಲ್ಲ ಅಂತ ಹೇಳಿ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ಏಳೆಂಟು ಆಸ್ಪತ್ರೆಗಳನ್ನು ಅಲೆದು ಕೊನೆಗೆ ಯಾವುದೋ ಒಂದು ಆಸ್ಪತ್ರೆ ಎದುರು ಪ್ರಾಣಬಿಟ್ಟ ಸನ್ನಿವೇಶವನ್ನು ಕಂಡಿದ್ದೇವೆ. ಇಂತಹ ಒಂದು ಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯಕ್ಕೆ ಕಪ್ಪುಚುಕ್ಕೆ. ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದು ಆಡಳಿತ ದುರವಸ್ಥೆ ಯಿಂದಾಗಿ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಹೊಣೆಯನ್ನು ನೇರವಾಗಿ ಸರ್ಕಾರವೇ ಹೊರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈಗ ಇನ್ನಷ್ಟು ಹೆಚ್ಚು ಕೋವಿಡ್ ತಪಾಸಣೆ ನಡೆಸುತ್ತೇವೆ ಎಂದು ಸರ್ಕಾರ ಹೇಳಿದೆ. ಇದನ್ನು ಮಾಡುವ ಮೂಲಕ ಮತ್ತು ಆರೋಗ್ಯ ಕಾರ್ಯಕರ್ತರ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ಹರಿಸಬೇಕು. ಆರೋಗ್ಯ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಹಾಗೂ ಕೊರತೆಯಿರುವ ವೈದ್ಯರ ಸ್ಥಾನವನ್ನು ತುಂಬಬೇಕಿದೆ. ಈಗಲಾದರೂ ಸರ್ಕಾರ ಕಣ್ಣು ತೆರೆದು ಇಂತಹ ಕೊರತೆಯ ನಿವಾರಣೆಗೆ ಮುಂದಾಗಬೇಕು. ಇದಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.