ಬೆಂಗಳೂರು: ಮಹಾಮಾರಿ ಕೊರೊನಾ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ರೆ ಮತ್ತೊಂದೆಡೆ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾನಗರ ಪಾಲಿಕೆ, ನಗರಸಭೆ ಮತ್ತು ಪುರಸಭೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕೊರೊನಾದಿಂದಾಗಿ ಹಾಳಾದ ಚರಂಡಿಗಳ ದುರಸ್ತಿ ಕಾರ್ಯ, ಹೊಸ ಚರಂಡಿಗಳ ನಿರ್ಮಾಣ ಹಾಗೂ ಸ್ವಚ್ಛತೆ ಕುರಿತು ಗಮನಹರಿಸಲು ಸಾಧ್ಯವಾಗದಂತಾಗಿದೆ.
ಮಳೆಗಾಲ ಬಂತೆಂದರೆ ಸಾವಿರಾರು ನಾಗರಿಕ ಸಮಸ್ಯೆ ಉದ್ಭವವಾಗುತ್ತವೆ. ಅದರಲ್ಲೂ ಮಹಾನಗರ ಪಾಲಿಕೆ ಪ್ರದೇಶಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತಲೇ ಇದೆ. ಇದರಿಂದ ನಾಗರಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಪ್ರವಾಹ ತಡೆಗೆ ಬಿಬಿಎಂಪಿ, ಮೈಸೂರು, ಹುಬ್ಬಳ್ಳಿ - ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗಳು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿವೆ.
ಬೆಂಗಳೂರಿನಲ್ಲಿ ಜೋರು ಮಳೆಯಾದರೆ ಸಾಕು ಒಂದಲ್ಲ ಒಂದು ಅವಾಂತರ ಸೃಷ್ಟಿಯಾಗುತ್ತಲೇ ಇರುತ್ತವೆ. ತಗ್ಗು ಪ್ರದೇಶ ಮತ್ತು ಕೊಳಗೇರಿ ನಿವಾಸಿಗಳ ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ. ನಗರದ ಅನೇಕ ಕಡೆ ರಾಜಕಾಲುವೆಗಳು ಉಕ್ಕಿ ಹರಿಯುತ್ತವೆ. ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗುತ್ತವೆ. ಮನೆಗಳಲ್ಲಿ ನೀರೇ ತುಂಬಿರುವ ಕಾರಣ ಜನರು ರಾತ್ರಿಯೆಲ್ಲ ಎದ್ದು ನರಕಯಾತನೆ ಅನುಭವಿಸುತ್ತಾರೆ.
ಜೋರು ಮಳೆಯಾದರೆ ತಗ್ಗು ಪ್ರದೇಶಗಳು ಮುಳುಗಡೆ ಇನ್ನು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ವಿಶೇಷ ತಂಡ ಹಾಗೂ ಕಂಟ್ರೋಲ್ ರೂಮ್ಗಳನ್ನು ತೆರೆಯಲಾಗಿದೆ. ಉತ್ತರ ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಪ್ರವಾಹದಂಥ ಕಹಿ ಘಟನೆ ನಡೆದರೂ ಸಮರ್ಪಕ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡಿಲ್ಲ. ಕೆಲವೆಡೆ ಮಾತ್ರ ಚರಂಡಿ ಸ್ವಚ್ಛಗೊಳಿಸಲಾಗಿದ್ದು, ಹಲವೆಡೆ ಈ ಕಾರ್ಯ ನಡೆದೇ ಇಲ್ಲ.
ಇನ್ನು ಸ್ವಚ್ಛನಗರಿ ಮೈಸೂರು ನಗರದ ವಿಷಯಕ್ಕೆ ಬಂದ್ರೆ ಅನುಮತಿ ಪಡೆಯದೇ ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವ ಬಡಾವಣೆಗಳು ಮಾತ್ರ ಮಳೆಗಾಲದಲ್ಲಿ ಜಲಾವೃತವಾಗುತ್ತವೆ. ಈ ರೀತಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬರಲು ಬೆಳಗಾವಿಯಂತೆ ಮೈಸೂರು ಪಾಲಿಕೆ ಕೂಡ ಒಂದು ವಿಶೇಷ ತಂಡ ರಚಿಸಿದೆ.
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ - ಧಾರವಾಢ ಮಹಾನಗರ ಪಾಲಿಕೆಯಲ್ಲಿ ಮಳೆಯಿಂದ ಬಹುತೇಕ ಕಡೆಗಳಲ್ಲಿ ಅವ್ಯವಸ್ಥೆ ಉಂಟಾಗುತ್ತಿದೆ. ಇದಕ್ಕಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೋಟಿ ಕೋಟಿ ಹಣವನ್ನು ಮೂಲಸೌಕರ್ಯಕ್ಕೆ ವ್ಯಯ ಮಾಡುತ್ತದೆ. ಆದರೆ, ಪ್ರತಿ ವರ್ಷ ಮಳೆಗಾದಲ್ಲಿ ಸಾರ್ವಜನಿಕರು ಅನುಭವಿಸುವ ತೊಂದರೆ ಮಾತ್ರ ಕಮ್ಮಿಯಾಗಿಲ್ಲ.
ಮಳೆಗಾಲದ ಸಂದರ್ಭದಲ್ಲಿ ಬಹುತೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುವುದು, ನಾಲಾ ತುಂಬಿ ಹರಿಯುವುದು ಹಾಗೂ ಒಳಚರಂಡಿ ಸೇರಿದಂತೆ ಬಹುತೇಕ ಸಮಸ್ಯೆಗಳು ಸಾರ್ವಜನಿಕರಿಗೆ ಬೆನ್ನು ಬಿಡದೇ ಕಾಡುತ್ತವೆ. ಸಮಪರ್ಕ ನಿರ್ವಹಣೆ ಕೊರತೆಯಿಂದ ಇಷ್ಟೆಲ್ಲ ಸಮಸ್ಯೆಯನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ಮಹಾನಗರಗಳ ಅಭಿವೃದ್ಧಿಗೆ ಸರ್ಕಾರ ಕೋಟಿ, ಕೋಟಿ ಸುರಿಯಲಾಗ್ತಿದೆ. ಆದ್ರೆ ಪ್ರತಿವರ್ಷ ಮಳೆಯಿಂದ ಆಗುತ್ತಿರುವ ತೊಂದರೆ ಮಾತ್ರ ತಪ್ಪಿಲ್ಲ. ಇನ್ನು ಮುಂದಾದರೂ ಕೂಡ ಮಳೆಗಾಲದಲ್ಲಿ ಸಂಭವಿಸುತ್ತಿರುವ ವಿಪತ್ತು ನಿರ್ವಹಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ.