ಬೆಂಗಳೂರು: ದೇಶದಲ್ಲಿ ಬ್ರಿಟಿಷರ ಆಡಳಿತ ಇದ್ದ ಸಂದರ್ಭ ಅಂದರೆ 1858ರಲ್ಲೇ ನದಿಗಳ ಜೋಡಣೆಯ ಪ್ರಸ್ತಾಪವಿತ್ತು. ಇದಾದ ಬಳಿಕ ಸಾಕಷ್ಟು ಬಾರಿ ಪ್ರಸ್ತಾಪವಾಗಿದ್ದ ಈ ವಿಚಾರ ಇದೀಗ ಪ್ರಸಕ್ತ ಬಜೆಟ್ನಲ್ಲೂ ಮತ್ತೊಮ್ಮೆ ಪ್ರಸ್ತಾಪವಾಗಿ ಬರಪೀಡಿದ ಜಿಲ್ಲೆಯ ನಿವಾಸಿಗಳ ಕಣ್ಣಲ್ಲಿ ಆಶಾಕಿರಣ ಮೂಡಿಸಿದೆ.
ಅಂದು ಬ್ರಿಟಿಷ್ ಅಧಿಕಾರಿ ಸರ್ ಆರ್ಥರ್ ಕಾಟನ್ ಅವರು ನದಿ ಜೋಡಣೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಕಡಿಮೆ ನೀರು ಇರುವ ನದಿಗಳಿಗೆ ಹೆಚ್ಚು ನೀರು ಇರುವ ನದಿಗಳಿಂದ ಕಾಲುವೆ ಮೂಲಕ ನೀರು ಹರಿಸುವ ಚಿಂತನೆ ಅಂದೇ ಮೂಡಿತ್ತು. ಆದರೆ, ಕಾಲಕಾಲಕ್ಕೆ ಇದರ ಪ್ರಸ್ತಾಪ ಆದಾಗೆಲ್ಲಾ ಖರ್ಚು ವೆಚ್ಚ ಹೆಚ್ಚು ಎಂಬ ಕಾರಣಕ್ಕೆ ಮುಂದೂಡುತ್ತಾ ಬರಲಾಗಿದೆ.
ಯೋಜನೆ ವೆಚ್ಚ ಅಧಿಕ ಹಾಗೂ ಉಷ್ಣ ಪ್ರದೇಶವನ್ನೇ ಹೊಂದಿರುವ ಪ್ರದೇಶದಲ್ಲಿ ಕಾಲುವೆ ಮೂಲಕ ನೀರು ತರುವಾಗ ಆವಿಯಾಗುವ ಪ್ರಮಾಣ ಹೆಚ್ಚು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದೀಗ ಐದು ನದಿಗಳ ಜೋಡಣೆ ವಿಚಾರ ಪ್ರಸಕ್ತ ಬಜೆಟ್ನಲ್ಲಿಯೂ ಪ್ರಸ್ತಾಪವಾಗಿದೆ.
ವಿವರ: 2020ರ ಫೆಬ್ರವರಿಯಲ್ಲಿ ಆಗಿನ ಜಲ ಶಕ್ತಿ ಸಚಿವಾಲಯವು ಗೋದಾವರಿ, ಕೃಷ್ಣ ಮತ್ತು ಕಾವೇರಿಯನ್ನು ಸಂಪರ್ಕಿಸುವ ಕರಡು ಡಿಪಿಆರ್ ಸಿದ್ಧಪಡಿಸಿದ್ದಾಗಿ ತಿಳಿಸಿತ್ತು. ಗೋದಾವರಿಯಿಂದ 247 ಟಿಎಂಸಿ ನೀರನ್ನು ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ದಕ್ಷಿಣ ಪ್ರದೇಶಗಳಿಗೆ ತಿರುಗಿಸಬಹುದು ಎಂಬುದು ಇದರ ವಿಚಾರವಾಗಿತ್ತು.
ಗೋದಾವರಿ ಭಾರತದ ಮೂರನೇ ಅತಿದೊಡ್ಡ ನದಿಯಾಗಿದ್ದು, ನಾಸಿಕ್ನಲ್ಲಿ ಹುಟ್ಟುತ್ತದೆ. ಈ ನದಿಯು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್ಗಡ ಮತ್ತು ಒಡಿಶಾ ಮೂಲಕ ಹರಿಯುತ್ತದೆ. ದೇಶದ ನಾಲ್ಕನೇ ದೊಡ್ಡ ನದಿಯಾದ ಕೃಷ್ಣಾ ಮಹಾಬಲೇಶ್ವರದಲ್ಲಿ ಹುಟ್ಟುತ್ತದೆ. ಇದು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಮೂಲಕ ಹರಿಯುತ್ತದೆ. ಪ್ರವಾಹಕ್ಕೆ ತುತ್ತಾಗುವ ಗೋದಾವರಿ ಮತ್ತು ವರ್ಷದ ಸಾಕಷ್ಟು ಸಮಯ ನೀರಿಲ್ಲದೇ ಸೊರಗುವ ಕೃಷ್ಣಾ ನದಿಯನ್ನು ಜೋಡಿಸುವ ಪ್ರಸ್ತಾಪ 1970ರಿಂದಲೂ ಕೇಳಿ ಬರುತ್ತಿದೆ.
ಮೂಲಭೂತವಾಗಿ, ಮಹಾನದಿ ಮತ್ತು ಗೋದಾವರಿಯಿಂದ ಹೆಚ್ಚುವರಿ ನೀರನ್ನು ಕೃಷ್ಣಾಗೆ ಇಂಚಂಪಲ್ಲಿ - ನಾಗಾರ್ಜುನ ಸಾಗರ, ಇಂಚಂಪಲ್ಲಿ - ಪುಲಿಚಿಂತಲ ಮತ್ತು ಪೋಲಾವರಂ-ವಿಜಯವಾಡ ಸೇರಿ ಮೂರು ಲಿಂಕ್ಗಳ ಮೂಲಕ ತಿರುಗಿಸುವ ಯೋಜನೆಯಾಗಿದೆ.
ಪೆನ್ನಾರ - ಕಾವೇರಿ ಜೋಡಣೆ:ಪೆನ್ನಾರ್ ನದಿ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಿಂದ ಹುಟ್ಟಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೂಲಕ ಹರಿಯುತ್ತದೆ. ಇದು ಬಂಗಾಳ ಕೊಲ್ಲಿವರೆಗೂ 597 ಕಿಮೀ ಹರಿಯುತ್ತದೆ. ಕಾವೇರಿ - ಪೆನ್ನಾರ್ ನದಿ ಜೋಡಣೆಯಾದರೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೆ ಯಥೇಚ್ಛವಾಗಿ ನೀರು ಲಭಿಸಲಿದೆ.
ಕೃಷ್ಣಾ, ಪೆನ್ನಾರ್ - ಕಾವೇರಿ:ನದಿಗೆ ಇನ್ನಷ್ಟು ತಿರುವನ್ನು ಸೃಷ್ಟಿಸಲು ಕೃಷ್ಣ (ಆಲಮಟ್ಟಿ), ಪೆನ್ನಾರ್, ಕೃಷ್ಣ (ಶ್ರೀಶೈಲಂ), ಪೆನ್ನಾರ್ ಮತ್ತು ಕೃಷ್ಣ (ನಾಗಾರ್ಜುನಸಾಗರ), ಪೆನ್ನಾರ್ (ಸೋಮಶಿಲಾ) ಎಂಬ ವಿವಿಧ ಲಿಂಕ್ಗಳನ್ನು ಪ್ರಸ್ತಾಪಿಸಲಾಗಿದೆ.
ಕೃಷ್ಣಾ (ಆಲಮಟ್ಟಿ) ಪೆನ್ನಾರ್ ಸಂಪರ್ಕವು ಕೃಷ್ಣಾ ಮತ್ತು ಪೆನ್ನಾರ್ ಜಲಾನಯನ ಪ್ರದೇಶದಲ್ಲಿನ ಮಾರ್ಗದ ಬಳಕೆಗಾಗಿ ಕೃಷ್ಣಾದಿಂದ 1980 ಎಂಎಂ ನೀರನ್ನು ತಿರುಗಿಸಲು ಯೋಜಿಸಿದೆ. ಆಲಮಟ್ಟಿ ಅಣೆಕಟ್ಟಿನ ಬಲದಂಡೆಯಿಂದ 587.175 ಕಿಮೀ ಉದ್ದದ ಸಂಪರ್ಕ ಕಾಲುವೆಯು ಕರ್ನಾಟಕದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳ ಮೂಲಕ ಹಾದು ಅಂತಿಮವಾಗಿ ಪೆನ್ನಾರ್ ನದಿಯ ಉಪನದಿಯಾದ ಮಡ್ಡಿಲೇರು ನದಿಯನ್ನು ಸೇರುತ್ತದೆ.
ಪೆನ್ನಾರ್ - ಕಾವೇರಿ, ತಮಿಳುನಾಡಿನ ಗುಂಡಾರ್ ಜಲಾನಯನ ಪ್ರದೇಶದ ಕಾವೇರಿ ನದಿಯ ಕೆಳಭಾಗದಲ್ಲಿರುವ ಪ್ರದೇಶದ ಬೇಡಿಕೆಗಳನ್ನು ಪೂರೈಸಲು ಪೆನ್ನಾರ್ ಸೋಮಸಿಲ ಗ್ರ್ಯಾಂಡ್ ಅನಿಕಟ್ ಲಿಂಕ್ ಮತ್ತು ದಕ್ಷಿಣ ಕಾವೇರಿ ವೈಗೈ ಗುಂಡಾರ್ ಲಿಂಕ್ ಕಾಲುವೆ ಮೂಲಕ ಕಾವೇರಿ ನದಿಯ ಕಡೆಗೆ ನೀರನ್ನು ತಿರುಗಿಸಲು ಪ್ರಸ್ತಾಪಿಸಲಾಗಿದೆ.
ಈ ಯೋಜನೆಯು ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ಜಿಲ್ಲೆಯ ಪೆನ್ನಾರ್ ನದಿಗೆ ಅಡ್ಡಲಾಗಿರುವ ಸೋಮಸಿಲಾ ಅಣೆಕಟ್ಟಿನಿಂದ 8,565 ಎಂಎಂ ನೀರನ್ನು ತಿರುಗಿಸಲು ಯೋಜಿಸಿದೆ. ಲಿಂಕ್ ಕಾಲುವೆಯು ಆಂಧ್ರಪ್ರದೇಶದ ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 4,91,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ.