ಮೊನ್ನೆ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೆಲುವು ಸಿಕ್ಕಿದೆ. ಇದೀಗ ಬಿಎಸ್ವೈ ಹೊಸ ಮಂತ್ರಿಮಂಡಲ ರಚಿಸಲು ಹೊರಟಿದ್ದಾರೆ. ಹೆಚ್ಡಿಕೆ ಮಂತ್ರಿಮಂಡಲದಲ್ಲಿ ಡಾ. ಜಯಮಾಲ ಮಂತ್ರಿ ಆಗಿದ್ದರು. ಜಯಮಾಲ ಹಾಗೂ ಹೆಚ್ಡಿಕೆ ಇಬ್ಬರೂ ಸಿನಿಮಾದೊಂದಿಗೆ ನಂಟು ಇರುವವರು. ಅದಕ್ಕೂ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಉಮಾಶ್ರೀ ಮಂತ್ರಿ ಆಗಿದ್ದರು. ಆದರೆ ಇದೀಗ ಬಿಎಸ್ವೈ ಮಂತ್ರಿಮಂಡಲದಲ್ಲಿ ಸಿನಿಮಾ ನಂಟಿರುವವರಿಗೆ ಮಂತ್ರಿ ಪದವಿ ಸಿಗಬಹುದಾ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಮೊದಲ ಕ್ಯಾಬಿನೆಟ್ ರಚನೆಯಲ್ಲಿ ಸುಮಾರು 15 ಶಾಸಕರು ಪ್ರಮಾಣವಚನ ಸ್ವಿಕರಿಸಲಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಬಿಜೆಪಿ ಪಕ್ಷಕ್ಕೆ ಸೇರಿರುವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ನಲ್ಲಿದ್ದಾಗ ಸಣ್ಣ ನೀರಾವರಿ ಮಂತ್ರಿ ಆಗಿದ್ದರು. ಇವರ ಸಹೋದರ ಮಧು ಬಂಗಾರಪ್ಪ ಜೆಡಿಎಸ್ನಿಂದ ಎಂಎಲ್ಸಿ ಆಗಿದ್ದರು.
ನೂತನ ಮಂತ್ರಿಮಂಡಲದಲ್ಲಿ ಸಿನಿಮಾದವರಿಗೆ ಸಿಗಲಿದೆಯಾ ವಿಶೇಷ ಸ್ಥಾನ..?
ರಾಜ್ಯ ರಾಜಕೀಯದ ಸದ್ಯದ ಪರಿಸ್ಥಿತಿ ಬದಲಾಗಿದೆ. ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಈ ಬಾರಿ ಬಿಎಸ್ವೈ ಮಂತ್ರಿಮಂಡಲದಲ್ಲಿ ಯಾವುದಾದರೂ ಸಿನಿಮಾ ನಟ ಅಥವಾ ನಟಿಯರಿಗೆ ಮಂತ್ರಿ ಪದವಿ ಸಿಗಬಹುದಾ ಎಂಬ ಕುತೂಹಲ ಕಾಡುತ್ತಿದೆ.
17 ಶಾಸಕರ ಅನರ್ಹ ಶಾಸಕರ ಪಟ್ಟಿಯಲ್ಲಿ ನಿರ್ಮಾಪಕ ಮುನಿರತ್ನ ನಾಯ್ಡು ಹಾಗೂ ನಟ, ನಿರ್ದೇಶಕ, ನಿರ್ಮಾಪಕ ಬಿ.ಸಿ. ಪಾಟೀಲ್ ಇದ್ದಾರೆ. ಇವರಿಬ್ಬರು ಬಿಜೆಪಿ ಸೇರಿದ ಮೇಲೆ ಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಅವರಿಬ್ಬರು ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಬಿಜೆಪಿಯಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದ ನವರಸನಾಯಕ ಜಗ್ಗೇಶ್ ಈ ಹಿಂದೆ ಕೆಎಸ್ಆರ್ಟಿಸಿ ಉಪಾಧ್ಯಕ್ಷ ಹಾಗೂ ಎಂಎಲ್ಸಿ ಆಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಯಶವಂತಪುರ ವಿಧಾನಸಭೆಯಿಂದ ಸ್ಪರ್ಧಿಸಿ ಜಗ್ಗೇಶ್ ಸೋತಿದ್ದರು.
ಮಹಿಳೆಯರ ಪೈಕಿ ತಾರಾ ಅನುರಾಧ, ಶ್ರುತಿ, ಮಾಳವಿಕ ಅವಿನಾಶ್, ಶಿಲ್ಪಾ ಗಣೇಶ್ ಕೆಲವು ವರ್ಷಗಳಿಂದ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ತಾರಾ ಎಂಎಲ್ಸಿ ಮಾತ್ರವಲ್ಲದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಕೂಡಾ ಆಗಿದ್ದರು. ಆದರೆ ಉಳಿದವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇದೀಗ ಶ್ರುತಿ, ಮಾಳವಿಕ ಹಾಗೂ ಶಿಲ್ಪಾ ಗಣೇಶ್ ಅವರಿಗೆ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷೆ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಸಂಸದೆಯಾಗಿ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿ ಆಗಿದ್ದರೂ ಅವರ ಒಲವು ಭಾರತೀಯ ಜನತಾ ಪಕ್ಷದ ಜೊತೆ ಇದೆ. ಸುಮಲತಾ ಅಂಬರೀಶ್ ಪಾರ್ಲಿಮೆಂಟರಿ ಕಮಿಟಿಗಳಲ್ಲಿ ಯಾವುದಾದರೂ ಹುದ್ದೆಗಳನ್ನು ಅಲಂಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.