ಕರ್ನಾಟಕ

karnataka

ETV Bharat / city

ಮಹಾಭಾರತದ ಯಯಾತಿಯಾಗಬಾರದು ಎಂದುಕೊಂಡ ಸಿಎಂ : ಮಕ್ಕಳ ಅಕಾಲ ರಾಜಕೀಯ ವೃದ್ಧಾಪ್ಯ ತಪ್ಪಿಸಲು ರಾಜೀನಾಮೆಗೆ ಸಿದ್ಧ!? - ಯಡಿಯೂರಪ್ಪರ ಮಕ್ಕಳ ರಾಜಕೀಯ ಭವಿಷ್ಯ

ನಾಡಿನ ಎಲ್ಲರ ಗಮನವೂ ಈಗ ಜುಲೈ 26ರಂದು ನಡೆಯುವ ಸರ್ಕಾರದ ಎರಡು ವರ್ಷದ ಸಾಧನಾ ಸಮಾರಂಭದ ಮೇಲೆ ನೆಟ್ಟಿದೆ. ಸಮಾರಂಭದ ನಂತರ ಯಡಿಯೂರಪ್ಪ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸಬಹುದು ಎನ್ನಲಾಗುತ್ತಿದೆ..

bsy
bsy

By

Published : Jul 21, 2021, 5:56 PM IST

Updated : Jul 22, 2021, 6:42 PM IST

ಬೆಂಗಳೂರು :ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕೀಯ ಇತಿಹಾಸವನ್ನು ಅವಲೋಕಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಮಕ್ಕಳ ಪಾಲಿಗೆ ಮಹಾಭಾರತದ ಯಯಾತಿಯಾಗುವ ಬದಲು ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಪದವಿ ತ್ಯಾಗಕ್ಕೆ ಮುಂದಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೋರಾಟವನ್ನೇ ಬದುಕಾಗಿಸಿಕೊಂಡಿರುವ ಬಿಎಸ್​ವೈ ಮಕ್ಕಳ ಅಕಾಲ ರಾಜಕೀಯ ವೃದ್ಧಾಪ್ಯಕ್ಕೆ ಕಾರಣವಾಗುವ ಆತಂಕದಿಂದಾಗಿಯೇ ಅಧಿಕಾರದಿಂದ ನಿರ್ಗಮಿಸಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯ ಕಂಡ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ರಾಮಕೃಷ್ಣ ಹೆಗಡೆ ಕೂಡ ಒಬ್ಬರು. ಮೂರು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ವಿಕೇಂದ್ರೀಕರಣದ ರೂವಾರಿ ಎನಿಸಿಕೊಂಡರೂ, ಅವರ ಪುತ್ರಿ ಮಮತಾ ನಿಚ್ಚಾನಿ ರಾಜಕೀಯದಲ್ಲಿ ನೆಲೆ ಕಾಣದೆ ಸೋತು ಮೂಲೆ ಸೇರಿದರು.

ಆನೆ ನಡೆದದ್ದೇ ದಾರಿ ಎನ್ನುವಂತೆ ರಾಜ್ಯದಲ್ಲಿ ರಾಜಕೀಯ ಮಾಡಿಕೊಂಡು ಬಂದವರು ಎಸ್.ಬಂಗಾರಪ್ಪ. ಕಾಂಗ್ರೆಸ್​ನಿಂದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿ ಸ್ವಂತ ಪಕ್ಷ ಪಟ್ಟಿ, ಸಮಾಜವಾದಿ ಪಕ್ಷ, ಬಿಜೆಪಿ ಸೇರಿ ಕೊನೆಗಾಲದಲ್ಲಿ ಜೆಡಿಎಸ್ ಸೇರಿದರು. ಮಕ್ಕಳ ರಾಜಕೀಯ ಭವಿಷ್ಯವನ್ನು ಬದಿಗೊತ್ತಿ ರಾಜಕೀಯ ಪ್ರತಿಷ್ಠೆಗಾಗಿ ಪಕ್ಷಾಂತರದಲ್ಲಿ ಕಾಲದೂಡಿದರು. ಪರಿಣಾಮ ಮಕ್ಕಳಿಬ್ಬರ ರಾಜಕೀಯ ಭವಿಷ್ಯ ಡೋಲಾಯಮಾನದಲ್ಲಿದೆ.

bsy

ಕಾಂಗ್ರೆಸ್​ನಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿ ಶಾಸಕರಾಗಿದ್ದರೂ, ರಾಜಕೀಯವಾಗಿ ಮೇಲೆ ಬರಲು ಸಾಧ್ಯವಾಗಿಲ್ಲ. ಮತ್ತೋರ್ವ ಪುತ್ರ ಮಧು ಬಂಗಾರಪ್ಪ ಜೆಡಿಎಸ್​ನಲ್ಲಿ ಭವಿಷ್ಯವಿಲ್ಲ ಎಂದು ಈಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಇನ್ನು, ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಜೆ.ಹೆಚ್ ಪಟೇಲ್, ಹಾಸ್ಯ ಪ್ರಜ್ಞೆಯ ಜೊತೆಗೆ ರಾಜಕೀಯ ಚತುರತೆಗೆ ಹೆಸರಾಗಿದ್ದವರು. ಸಮಾಜವಾದಿ ನಾಯಕ ಪಟೇಲ್ ಬದುಕಿರುವವರೆಗೂ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ. ಪಟೇಲ್ ಅಗಲಿಕೆ ನಂತರ ಅವರ ಉತ್ತರಾಧಿಕಾರಿಯಾಗಿ ರಾಜಕೀಯ ಪ್ರವೇಶ ಮಾಡಿರುವ ಪುತ್ರ ಮಹಿಮಾ ಜೆ ಪಟೇಲ್, ಒಮ್ಮೆ ಶಾಸಕರಾದರೂ ನಂತರ ಗೆಲ್ಲಲು ಸಾಧ್ಯವಾಗಲಿಲ್ಲ. ಜೆಡಿಎಸ್,ಕಾಂಗ್ರೆಸ್ ಸ್ವಂತ ಪಕ್ಷದ ನಂತರ ಈಗ ಜೆಡಿಯು ಸೇರಿದ್ದಾರೆ. ಆದರೂ ರಾಜಕೀಯ ಭದ್ರ ನೆಲೆ ಸಿಗುತ್ತಿಲ್ಲ.

ಈ ನಾಯಕರೆಲ್ಲಾ ತಮ್ಮ ತಮ್ಮ ರಾಜಕೀಯ ಉದ್ದೇಶ ಕಾರಣಗಳಿಗೆ ರಾಜಕಾರಣ ಮಾಡಿದ್ದರೇ ಹೊರತು ಮಕ್ಕಳ ಭವಿಷ್ಯದ ಬಗ್ಗೆ ಅಷ್ಟು ಆದ್ಯತೆ ನೀಡಿರಲಿಲ್ಲ. ಅದರ ಪರಿಣಾಮ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ರಾಜಕೀಯ ಸ್ಥಿತಿ ಡೋಲಾಯಮಾನವಾಗಿದೆ. ಇಂತಹ ಉದಾಹರಣೆಗಳನ್ನು ನೆನಪಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ಮುಖ್ಯಮಂತ್ರಿ ಕುರ್ಚಿ ಮತ್ತು ಮಕ್ಕಳ ರಾಜಕೀಯ ಭವಿಷ್ಯವನ್ನು ತಕ್ಕಡಿಯಲ್ಲಿ ಹಾಕಿ ತೂಗಿ ನೋಡುತ್ತಿದ್ದಾರೆ. ಹೊಸ ಪಕ್ಷ ಕಟ್ಟುವುದು, ಬೇರೆ ಪಕ್ಷಕ್ಕೆ ಹೋಗುವುದೆಲ್ಲಾ ಸಾಧ್ಯವಿಲ್ಲದ ಕಾರಣ ಪಕ್ಷದಲ್ಲಿದ್ದೇ ಮಕ್ಕಳ ಭವಿಷ್ಯ ಗಟ್ಟಿಗೊಳಿಸಬೇಕಿದೆ.

ಒಬ್ಬ ಪುತ್ರ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ. ಮೂರನೇ ಬಾರಿ ಸಂಸತ್ ಪ್ರವೇಶಿಸಿದರೂ ಅಪ್ಪನ ನೆರಳಿನಲ್ಲೇ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು, ಮತ್ತೊಬ್ಬ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ವರುಣಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಜಯೇಂದ್ರಗೆ ಟಿಕೆಟ್ ತಪ್ಪಿಸಲಾಯಿತು. ಬಸವಕಲ್ಯಾಣ ಕ್ಷೇತ್ರದಲ್ಲೂ ಅದು ಪುನರಾವರ್ತನೆಯಾಯಿತು. ಅಪ್ಪ ಮುಖ್ಯಮಂತ್ರಿ ಆಗಿದ್ದರೂ ಮಗನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈಗ ಹಾನಗಲ್ ಕ್ಷೇತ್ರದ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದಾರೆ. ಆದರೆ, ಅದು ಕೂಡ ಅಷ್ಟು ಸುಲಭವಾಗಿ ಸಿಗುವುದು ಅನುಮಾನ.

ಇದಕ್ಕೆಲ್ಲಾ ಕುಟುಂಬ ರಾಜಕೀಯದ ಹಣೆಪಟ್ಟಿ ಕಾರಣವಾಗಿದೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುತ್ತಾ ಮಕ್ಕಳನ್ನು ರಾಜಕೀಯವಾಗಿ ಮುನ್ನಲೆಗೆ ತರುವುದು ಕಷ್ಟ ಎನ್ನುವುದು ಮನವರಿಕೆಯಾಗಿದೆ. ಹಾಗಾಗಿಯೇ, ಅಧಿಕಾರಕ್ಕಾಗಿ ಯಯಾತಿ ರೀತಿ ಮಕ್ಕಳ ರಾಜಕೀಯ ಭವಿಷ್ಯವನ್ನು ಕಸಿದುಕೊಂಡು ಮಕ್ಕಳ ಅಕಾಲ ರಾಜಕೀಯ ವೃದ್ಧಾಪ್ಯಕ್ಕೆ ತಳ್ಳಬಾರದು ಎನ್ನುವ ನಿರ್ಧಾರಕ್ಕೆ ಬಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಕ್ಕಳನ್ನು ರಾಜಕೀಯ ಮುನ್ನಲೆಗೆ ತರಲು ಹೊರಟಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ಸ್ಥಾನ ತೊರೆದಲ್ಲಿ, ವಿಜಯೇಂದ್ರ ರಾಜ್ಯ ಸಚಿವ ಸಂಪುಟ ಸೇರಲಿದ್ದಾರೆ. ವಿಧಾನಸಭೆಗೂ ಪ್ರವೇಶಿಸಲಿದ್ದಾರೆ. ಈಗಾಗಲೇ ಉಪ ಚುನಾವಣೆ ಸ್ಪೆಷಲಿಸ್ಟ್ ಎಂದು ಕರೆಸಿಕೊಳ್ಳುತ್ತಿರುವ ವಿಜಯೇಂದ್ರ ರಾಜಕೀಯವಾಗಿ ಬೇಗ ಬೆಳವಣಿಗೆ ಕಾಣುತ್ತಿದ್ದಾರೆ. ಹಾಗಾಗಿ, ಯುವ ಮೋರ್ಚಾದಿಂದ ರಾಜ್ಯ ಘಟಕಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ಈಗ ಸಚಿವ ಸ್ಥಾನ ಸಿಕ್ಕಲ್ಲಿ ರಾಜಕೀಯ ಮುನ್ನಲೆಗೆ ಬರುವಷ್ಟು ಬೆಳೆಯಲಿದ್ದಾರೆ. ಭವಿಷ್ಯದಲ್ಲಿ ಲಿಂಗಾಯತ ಸಮುದಾಯದ ನಾಯಕನಾಗಿ ಬೆಳೆಯಲಿದ್ದಾರೆ ಎನ್ನುವ ಲೆಕ್ಕಾಚಾರ ಯಡಿಯೂರಪ್ಪ ಅವರದ್ದಾಗಿದೆ. ಇನ್ನು, ರಾಘವೇಂದ್ರಗೆ ಕೇಂದ್ರದಲ್ಲಿ ಯಾವುದಾದರೂ ಸ್ಥಾನಮಾನ ಲಭ್ಯವಾಗುವ ಸಾಧ್ಯತೆ ಇದ್ದು, ಶಿವಮೊಗ್ಗ ಕ್ಷೇತ್ರವನ್ನು ಗಟ್ಟಿಗೊಳಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.

ಎಲ್ಲರ ಗಮನವೂ ಈಗ ಜುಲೈ 26ರಂದು ನಡೆಯುವ ಸರ್ಕಾರದ ಎರಡು ವರ್ಷದ ಸಾಧನಾ ಸಮಾರಂಭದ ಮೇಲೆ ನೆಟ್ಟಿದೆ. ಸಮಾರಂಭದ ನಂತರ ಯಡಿಯೂರಪ್ಪ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸಬಹುದು ಎನ್ನಲಾಗುತ್ತಿದೆ.

Last Updated : Jul 22, 2021, 6:42 PM IST

ABOUT THE AUTHOR

...view details