ಬೆಂಗಳೂರು :ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪರೀಕ್ಷೆ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕೆಲ ಅಭ್ಯರ್ಥಿಗಳು ಸಾಕ್ಷ್ಯಗಳ ಸಹಿತ ಲಿಖಿತ ದೂರನ್ನು ಸಲ್ಲಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ವದಂತಿಗಳಿಗೆ ಪುಷ್ಠಿ ನೀಡುವಂತೆ, ಮಾರ್ಚ್ 14ರಂದು ನಡೆದ ಭೌಗೋಳಿಕ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳ ಗುಂಪೊಂದು ಆರೋಪಿಸಿದೆ. ದೂರಿನ ಪ್ರಕಾರ ಸ್ನ್ಯಾಪ್‌ಚಾಟ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಇಬ್ಬರು ಅಭ್ಯರ್ಥಿಗಳ ನಡುವೆ ಸ್ನ್ಯಾಪ್‌ಚಾಟ್ ಸಂದೇಶಗಳ ವಿನಿಮಯದ ಬಗ್ಗೆ ದೂರುದಾರರು ಗಮನ ಸೆಳೆದಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ಮಹಿಳಾ ಅಭ್ಯರ್ಥಿಯೊಬ್ಬರು ಬೆಳಗ್ಗೆ 8.30ಕ್ಕೆ ಪ್ರಶ್ನೆ ಪತ್ರಿಕೆಯನ್ನು ಮತ್ತೊಬ್ಬ ಪರೀಕ್ಷಾರ್ಥಿಗೆ ಕಳುಹಿಸಿದ್ದಾರೆ. ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆಯು ಸ್ನ್ಯಾಪ್‌ಚಾಟ್‌ನಲ್ಲಿ ಹಂಚಿಕೊಂಡಿರುವಂತೆಯೇ ಇತ್ತು ಎಂದು ದೂರುದಾರರು ಹೇಳಿದ್ದಾರೆ.
ಚುಕ್ಕೆಗಳು, ಪ್ರಶ್ನಾರ್ಥಕ ಚಿಹ್ನೆಗಳು, ಪೂರ್ಣ ವಿರಾಮಗಳು, ಎಲ್ಲವೂ ಒಂದೇ ಆಗಿದ್ದವು ಎಂದು ದೂರಿನಲ್ಲಿ ಹೇಳಲಾಗಿದೆ. ಇತ್ತ ಪರೀಕ್ಷೆ ಮುಗಿದು ತಿಂಗಳು ಕಳೆದಿದ್ದು, ಅವರು ಈಗ ದೂರು ಸಲ್ಲಿಸಿದ್ದಾರೆ. ಅದು ಸ್ವೀಕಾರಾರ್ಹವಲ್ಲ ಆದರೂ ವಿಚಾರಣೆ ಮಾಡಿ ದೂರುದಾರರನ್ನು ಕರೆದು ಪರಿಶೀಲಿಸುತ್ತೇವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಗುಡ್ನ್ಯೂಸ್ : ಕೋವಿಶೀಲ್ಡ್, ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ದರದಲ್ಲಿ ಇಳಿಕೆ.. ಪ್ರತಿ ಡೋಸ್ಗೆ 225 ರೂ. ಮಾತ್ರ