ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅಧಿಕಾರ ದುರುಪಯೋಗಪಡಿಸಿಕೊಂಡು ನಿಗಮ ಕಚೇರಿಯ ಸಿಸಿಟಿವಿ ಹಾಗೂ ಡಿವಿಆರ್ ವಿರೂಪಗೊಳಿಸುವ ಮೂಲಕ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆರು ಪುಟಗಳ ದೂರು ನೀಡಿದ್ದಾರೆ.
ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ನಿಗಮದಲ್ಲಿ ಹಲವಾರು ಅಕ್ರಮ, ಅವ್ಯವಹಾರ ನಡೆಸಿದ್ದಾರೆ. ಅಲ್ಲದೇ, ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವಂತೆ ಪದ ಬಳಸಿ ನಿಂದಿಸಿದ್ದಾರೆ. ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಿಗಮದ ಹಣ ದುರುಪಯೋಗ ಪಡಿಸಿಕೊಳ್ಳುವುದರ ಜತೆಗೆ ನಿಗಮಕ್ಕೆ ಸಾಕಷ್ಟು ನಷ್ಟ ಉಂಟು ಮಾಡಿದ್ದು, ವೈಯಕ್ತಿಕವಾಗಿ ಎಸಗಿರುವ ಅಕ್ರಮಗಳು, ತಪ್ಪುಗಳಿಂದಾಗಿ ನಿಗಮಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಆರೋಪಿಸಿರುವ ರೂಪಾ, ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
2017-18ರಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ವಂಚಿಸಿದ್ದ ಅಂದಿನ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಜಿ. ಕಿಶೋರ್ ಕುಮಾರ್ ಅವರನ್ನು ಮತ್ತೆ ನಿಗಮ ಮಂಡಳಿಗೆ ತೆಗೆದುಕೊಳ್ಳಲು ರಾಘವೇಂದ್ರ ಶೆಟ್ಟಿ ಮುಂದಾಗಿದ್ದರು. ಈ ಸಂಬಂಧ ಇಬ್ಬರ ನಡುವೆ ಐದು ಕೋಟಿ ರೂಪಾಯಿ ವ್ಯವಹಾರದ ಮಾತುಕತೆ ನಡೆಸಿ, ಕಿಶೋರ್ ಅವರನ್ನು ಮತ್ತೆ ಉದ್ಯೋಗಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ.
ರಾಘವೇಂದ್ರ ಶೆಟ್ಟಿ ಅವರ ವೈಯಕ್ತಿಕ ಚೆಕ್‍ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಮೇ 26ರಂದು ಶಿರಸಿ ಪೊಲೀಸರು ನಿಗಮದ ಕಚೇರಿಯ ಕೋಣೆ ಬಾಗಿಲಿಗೆ ಸಮನ್ಸ್ ಅಂಟಿಸಿದ್ದಾರೆ. ಅಲ್ಲದೇ, ನಿಗಮದ ಶೋ ರೂಂಗಳಿಂದ ಲಕ್ಷಗಟ್ಟಲೇ ಬೆಲೆಬಾಳುವ ಗಂಧದ ಹಾಗೂ ಇತರೆ ಸಾಮಗ್ರಿಗಳನ್ನು ಯಾವುದೇ ಅನುಮತಿ ಪಡೆಯದೆ ವೈಯಕ್ತಿಕ ಉಪಯೋಗಕ್ಕೆ ಕೊಂಡೊಯ್ದಿದ್ದಾರೆ. ರಾಘವೇಂದ್ರ ಶೆಟ್ಟಿ ಅವರು ನಾಲ್ವರು ಸಿಬ್ಬಂದಿ ನೇಮಕ ಮಾಡಿಕೊಂಡಿರುವುದಾಗಿ ಹೇಳಿ ಅಕ್ರಮವಾಗಿ ತಮ್ಮ ಸಹಿಯಲ್ಲಿ ಸಂಬಳ ಮಂಜೂರು ಮಾಡಿಕೊಳ್ಳುತ್ತಿದ್ದರು. ಅಲ್ಲದೇ, ಕಳೆದ 10 ತಿಂಗಳಿಂದ ಶ್ರೀಕಾಂತ್ ಚೌರಿ ಎಂಬುವರನ್ನು ಪಿಎ ಆಗಿ ನೇಮಿಸಿಕೊಂಡಿದ್ದರು. ಈತ ಸಬ್ ಇನ್ಸ್ಪೆಕ್ಟರ್ ಹುದ್ದೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾನೆ. ಈ ಹಗರಣದಲ್ಲಿ ರಾಘವೇಂದ್ರ ಶೆಟ್ಟಿ ಅವರ ಪಾತ್ರದ ಬಗ್ಗೆಯೂ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಡಿ ರೂಪ ಕೋರಿದ್ದಾರೆ.
ಇದನ್ನೂ ಓದಿ:ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣ: ಚಾರ್ಜ್ ಶೀಟ್ನಲ್ಲಿ ಡಿಜಿ ಹೆಸರು ಕೈಬಿಟ್ಟಿದ್ದರೆ ಕಾನೂನು ಹೋರಾಟ.. ಡಿ.ರೂಪಾ