ಕರ್ನಾಟಕ

karnataka

ETV Bharat / city

IPL ಕ್ರಿಕೆಟ್ ಬೆಟ್ಟಿಂಗ್: ಬೆಂಗಳೂರಿನಲ್ಲಿ ಓರ್ವನ ಬಂಧನ, 15 ಲಕ್ಷ ರೂ.ವಶ - ಬೆಂಗಳೂರು

ಲಾರ್ಡ್ಸ್ ಎಕ್ಸ್ಚೇಂಜ್ ಆ್ಯಪ್ ಮೂಲಕ ಬೆಟ್ಟಿಂಗ್ ರೇಟ್ ನೋಡಿಕೊಂಡು ಹಣ ಪಣವಾಗಿ ಕಟ್ಟಿಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

bangalore
ನವೀನ್ ಬಂಧಿತ ಆರೋಪಿ

By

Published : Oct 1, 2021, 4:39 PM IST

ಬೆಂಗಳೂರು:ಲಾರ್ಡ್ಸ್ ಎಕ್ಸ್ಚೇಂಜ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂದಿರಾ ನಗರ ನಿವಾಸಿ ನವೀನ್ (31) ಬಂಧಿತ ಆರೋಪಿ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿ, 'ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡಬಲ್ ರಸ್ತೆಯ ಗೇಟ್‍ವೇ ಏರ್ ಕ್ಲಿನಿಕ್ ಎಂಬ ಸಲೂನ್ ಬಳಿ ಕೆಲವರು ಗುರುವಾರ ಸನ್‌ರೈಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಪಂದ್ಯಗಳಿಗೆ ಸಂಬಂಧಿಸಿದಂತೆ ತಂಡಗಳ ಸೋಲು, ಗೆಲುವಿನ ಬಗ್ಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ಮಾಹಿತಿ ದೊರಕಿತ್ತು.

ಅಲ್ಲದೇ, ರಾಜಸ್ತಾನ್ ರಾಯಲ್ಸ್ ತಂಡ ಮತ್ತು ಇತರ ತಂಡಗಳ ಪಂದ್ಯಗಳಲ್ಲಿಯೂ ಇವರು ಬೆಟ್ಟಿಂಗ್ ನಡೆಸಿದ್ದು, ಈ ಬಗ್ಗೆ ಬೆಟ್ಟಿಂಗ್ ಹಣ ಕಟ್ಟಿದ್ದ ಪಂಟರುಗಳಿಂದ ಸೋಲು ಮತ್ತು ಗೆಲುವಿನ ಹಣ ಪಡೆಯುವುದು ಮತ್ತು ಹಣವನ್ನು ನೀಡುವುದನ್ನು ಮಾಡಿಕೊಂಡಿದ್ದರು.

ಲಾರ್ಡ್ಸ್ ಎಕ್ಸ್‌ಚೇಂಜ್ ಎಂಬ ಆ್ಯಪ್ ಮತ್ತು ವೆಬ್ ಸೈಟ್ ಮೂಲಕ ಬೆಟ್ಟಿಂಗ್ ರೇಶಿಯೋ ನೋಡಿಕೊಂಡು, ಮೊಬೈಲ್, ವಾಟ್ಸ್​​ ಆ್ಯಪ್​​ ಆ್ಯಪ್ ಮೂಲಕ ಸಂಪರ್ಕಿಸಿ ಗಿರಾಕಿಗಳು ಸೂಚಿಸಿದಂತೆ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿರುವುದಾಗಿ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ತೊಡಗಿದ್ದ ಆರೋಪಿಯನ್ನು ಬಂಧಿಸಿ, 15 ಲಕ್ಷ ರೂ ಹಣ ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ' ಎಂದು ತಿಳಿಸಿದರು.

ಆರೋಪಿ ನವೀನ್ ವಿರುದ್ದ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಈತ ಹಿಂದೆ ನಡೆದ ಕೆಲವು ಐಪಿಎಲ್ ಪಂದ್ಯಗಳಿಗೆ ಬೆಟ್ಟಿಂಗ್ ನಡೆಸಿರುವುದು ಪತ್ತೆಯಾಗಿದೆ.

ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್ ಮಾರ್ಗದರ್ಶನದಲ್ಲಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಎನ್. ಹನುಮಂತರಾಯ, ಪೊಲೀಸ್ ಇನ್ಸ್‌ಪೆಕ್ಟರ್‌ ಜಿ. ಶಿವಪ್ರಸಾದ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ABOUT THE AUTHOR

...view details