ಬೆಂಗಳೂರು: 2,500 ಕೋಟಿ ನೀಡಿದರೆ ನನಗೂ ಸಿಎಂ ಸ್ಥಾನವನ್ನು ಕೊಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಿ ಎಂದು ಕಾಂಗ್ರೆಸ್ ನಿಯೋಗ ಎಸಿಬಿಗೆ ದೂರು ನೀಡಿದೆ. ಮನೋಹರ್ ನೇತೃತ್ವದ ನಿಯೋಗ ಎಸಿಬಿಗೆ ದೂರು ನೀಡಿದ್ದು, ಯತ್ನಾಳ್ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ತಮ್ಮ ದೂರಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಸಭೆಯಲ್ಲಿ 2,500 ಕೋಟಿ ಹಣ ನೀಡಿದರೆ ಮುಖ್ಯಮಂತ್ರಿ ಸ್ಥಾನ ಹಾಗೂ ಮಂತ್ರಿ ಸ್ಥಾನ ದೊರಕುತ್ತದೆ. ಅದಕ್ಕೆ ದೆಹಲಿಯಿಂದ ಅನೇಕರು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅತ್ಯಂತ ಗಂಭೀರವಾಗಿರುವ ಹೇಳಿಕೆಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದೆ.
ಯತ್ನಾಳ್ ವಿರುದ್ಧ ಎಸಿಬಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ ಯತ್ನಾಳ್ ಅವರು ಅನೇಕ ಬಾರಿ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿವೆ ಎಂದು ಬಹಿರಂಗ ಪಡಿಸಿದ್ದಾರೆ. ಆದರೆ ಭ್ರಷ್ಟಾಚಾರ ನಿಗ್ರಹದಳ ಇದುವರೆವಗೂ ಸಹ ಸ್ವಯಂಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡಿರುವುದಿಲ್ಲ. ಈಗ ನಾವು ಖುದ್ದಾಗಿ ದೂರನ್ನು ನೀಡುತ್ತಿದ್ದೇವೆ. ಇದರ ಬಗ್ಗೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತನಿಖೆಗೆ ಒಳಪಡಿಸಿ ಭ್ರಷ್ಟಾಚಾರದ ಬಗ್ಗೆ ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದೆ.
ಯತ್ನಾಳ್ ಹೇಳಿಕೆ ಕುರಿತು ರಾಜ್ಯಪಾಲರಿಂದ ತನಿಖೆಗೆ ಆದೇಶ:ಕೂಡಲೇ ರಾಜ್ಯಪಾಲರು ಯತ್ನಾಳ್ ಹೇಳಿಕೆ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಾದ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಳಿಕೆ ಬಿಡುಗಡೆ ಮಾಡಿರುವ ಅವರು, ಸಿಎಂ ಮಾಡಲು ಕೇಂದ್ರದ ನಾಯಕರು 2,500 ಕೋಟಿ ಕೊಡಿ ಎಂದು ಕೇಳಿರುವ ಹಿನ್ನಲೆ ಅಮಿತ್ ಈ ಹಿಂದೆ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ರೆ, ಇದಕ್ಕೆ ಪೂರಕವಾಗಿ ಯತ್ನಾಳ್ ಅವರಿಗೆ ಎರಡೂವರೆ ಸಾವಿರ ಕೋಟಿ ಹಣ ಕೇಂದ್ರದ ನಾಯಕರು ಕೇಳಿರಬೇಕು. ಯತ್ನಾಳ್ ಜವಾಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ. ಸಿಎಂ ಸ್ಥಾನಕ್ಕಾಗಿ ಎರಡೂವರೆ ಸಾವಿರ ಕೋಟಿ ಕೇಳಿರುವುದು ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷ ನಾಯಕ ಬಿ.ಕೆ. ಹರಿಪ್ರಾದ್ ಒತ್ತಾಯ ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿರೋದು ಸ್ಪಷ್ಟವಾಗಿ ಕಾಣುತ್ತಿದೆ. ಧರ್ಮದ ಮೇಲೆ, ಹಣದ ಮೇಲೆ ರಾಜಕೀಯ ನಡೆಸುವುದು ಬಿಜೆಪಿಯ ಚುನಾವಣ ಕಾರ್ಯತಂತ್ರ. ಹಣ ಕೇಳಿದ್ದು ಯಾರು ಎಂದು ಕೂಡಲೇ ಯತ್ನಾಳ್ ಅವರು ಸ್ಪಷ್ಟಪಡಿಸಬೇಕು. ಅಮಿತ್ ಶಾ ಕೇಳಿದ್ದಾ? ಮೋಹನ್ ಭಾಗವತ್ ಕೇಳಿದ್ದಾ? ನಡ್ಡಾ ಕೇಳಿದ್ದಾ? ಇಲ್ಲ ಮೋದಿ ಅವ್ರು ಕೇಳಿದ್ದಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:'ನಿಮ್ಮನ್ನು ಸಿಎಂ ಮಾಡ್ತೀವಿ, 2,500 ಕೋಟಿ ರೆಡಿ ಮಾಡಿಡಿ ಅಂದಿದ್ರು': ಯತ್ನಾಳ್