ಬೆಂಗಳೂರು: ಮನುಷ್ಯನ ಮನಸ್ಸು ದೇಹಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಲು ಯೋಗದ ಮಹತ್ವ ದೊಡ್ಡದು. ಯೋಗಾಭ್ಯಾಸ ಜೀವನ ಕ್ರಮ. ಲೋಕಕಲ್ಯಾಣಕ್ಕೆ ಅವಶ್ಯಕವಾದ ಉಪಕರಣ. ಭಾರತ ಈ ಮಹತ್ತರ ಉಪಕರಣವನ್ನು ಲೋಕಕ್ಕೆ ಕೊಡುಗೆ ನೀಡುವ ಮೂಲಕ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಆಯೋಜಿಸಲಾಗಿದ್ದ ಬೃಹತ್ ಯೋಗ ಪ್ರದರ್ಶನದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು 192 ದೇಶಗಳು ಯೋಗದಿನವನ್ನು ಆಚರಿಸುತ್ತಿರುವುದು ಭಾರತದ ಪಾಲಿಗೆ ಹೆಮ್ಮೆಯಾಗಿದೆ. ಇಂದು ನಮ್ಮ ಯೋಧರು ಸಿಯಾಚಿನ್ ನಂತಹ ಅತಿಶೀತ ಪ್ರದೇಶದಲ್ಲಿಯೂ ಯೋಗದಿನವನ್ನು ಆಚರಿಸುವ ಮೂಲಕ ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆಂದರು.