ಕರ್ನಾಟಕ

karnataka

By

Published : Sep 1, 2021, 6:03 PM IST

ETV Bharat / city

ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ; ಬೊಮ್ಮಾಯಿ ನೆರವಿಗೆ ಧಾವಿಸಲಿದ್ದಾರಾ ಅಮಿತ್ ಶಾ?

ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮದೇ ಆದ ಖಾಸಗಿ ಮೂಲಗಳಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸರ್ಕಾರ ಮತ್ತು ಪಕ್ಷ ಸಂಘಟನೆಗೆ ಹಿನ್ನಡೆಯಾಗುವ ಯಾವುದೇ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಿದ್ದಾರೆ ಎನ್ನಲಾಗ್ತಿದೆ.

internal-displeasure-in-state-bjp-and-amith-sha-intervene
ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ; ಬೊಮ್ಮಾಯಿ ನೆರವಿಗೆ ಧಾವಿಸಲಿದ್ದಾರಾ ಅಮಿತ್ ಶಾ..?

ಬೆಂಗಳೂರು:ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೂ ಪಕ್ಷದಲ್ಲಿನ‌ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಬಿಎಸ್​ವೈ ವಿರೋಧಿ ಪಾಳಯ ಮತ್ತು ಸಚಿವ ಸ್ಥಾನ ವಂಚಿತರಲ್ಲಿನ ಅಸಮಾಧಾನ ಬೊಮ್ಮಾಯಿ ಸರ್ಕಾರಕ್ಕೆ ಸವಾಲಾಗಿದ್ದು, ಬಿಜೆಪಿಯ ಚಾಣಾಕ್ಷ ಅಮಿತ್ ಶಾ ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ಕೈ ಹಾಕಲಿದ್ದಾರೆ, ಬೊಮ್ಮಾಯಿ ನೆರವಿಗೆ ಧಾವಿಸಲಿದ್ದಾರೆ ಎಂದು ಹೇಳಲಾಗ್ತಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ‌ದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ತಿಂಗಳು ಕಳೆದಿದೆ. ಆದರೆ ಪಕ್ಷದಲ್ಲಿ ಅಸಮಾಧಾನ ಮಾತ್ರ ತಣ್ಣಗಾಗಿಲ್ಲ. ಬಿಎಸ್​ವೈ ವಿರೋಧಿ ಬಣ ಬುಸುಗುಟ್ಟುತ್ತಲೇ ಇದೆ. ಮುಖ್ಯಮಂತ್ರಿ ಸ್ಥಾನದ ರೇಸ್​​ನಲ್ಲಿದ್ದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್​​ಗೆ ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಸಿ.ಪಿ. ಯೋಗೀಶ್ವರ್ ಇದ್ದ ಸಚಿವ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಯಡಿಯೂರಪ್ಪ ಅವರೇ ನೇರ ಕಾರಣ ಎಂದು ಈ ಮೂವರೂ ನಾಯಕರು ಬಿಎಸ್​ವೈ ವಿರುದ್ಧ ಕೆಂಡ ಕಾರುತ್ತಲೇ ಇದ್ದಾರೆ. ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಅಪಸ್ವರ ತೆಗೆದಿದ್ದಾರೆ.

ಸಚಿವ ಸ್ಥಾನ ವಂಚಿತ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮಾ, ನೆಹರೂ ಓಲೇಕಾರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆ ಸಚಿವ ಸ್ಥಾನ ಕಳೆದುಕೊಂಡಿರುವ ಲಕ್ಷ್ಮಣ‌‌ ಸವದಿ, ಶ್ರೀಮಂತ ಪಾಟೀಲ್, ಆರ್.ಶಂಕರ್ ಕುಪಿತರಾಗಿದ್ದಾರೆ.‌ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಸಚಿವ ಸ್ಥಾನ ಸಿಕ್ಕರೂ ಖಾತೆಗೆ ಕ್ಯಾತೆ ತೆಗೆದಿರುವ ಆನಂದ್ ಸಿಂಗ್ ರಾಜೀನಾಮೆ ಹಂತದವರೆಗೂ ನಿರ್ಧರಿಸಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಬಿಎಸ್​​ವೈ ವಿರೋಧಿಗಳನ್ನು ನಿಭಾಯಿಸಿಕೊಂಡು, ಸಚಿವ ಸ್ಥಾನ ವಂಚಿತರನ್ನು ಸಂಭಾಳಿಸಿಕೊಂಡು, ಖಾತೆ ಕ್ಯಾತೆಯನ್ನೂ ಸರಿದೂಗಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಬಿದ್ದಿದೆ. ಬಸವರಾಜ ಬೊಮ್ಮಾಯಿ ಈ ಸಂಬಂಧ ಈಗಾಗಲೇ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಎಲ್ಲಾ ವಿವರವನ್ನೂ ವರಿಷ್ಠರ ಗಮನಕ್ಕೆ ತಂದಿದ್ದಾರೆ.

ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮದೇ ಆದ ಖಾಸಗಿ ಮೂಲಗಳಿಂದ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸರ್ಕಾರ ಮತ್ತು ಪಕ್ಷ ಸಂಘಟನೆಗೆ ಹಿನ್ನಡೆಯಾಗುವ ಯಾವುದೇ ಚಟುವಟಿಕೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಿದ್ದಾರೆ ಎನ್ನಲಾಗಿದೆ.

ನಾಳೆ ದಾವಣಗೆರೆಗೆ ಅಮಿತ್ ಶಾ...

ನಾಳೆ ದಾವಣಗೆರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅಮಿತ್ ಶಾ ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಪ್ರಯಾಣಿಸಲಿದ್ದಾರೆ. ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದ ನಡುವೆ ಜಿಎಂಐಟಿ ಅತಿಥಿಗೃಹದಲ್ಲಿ ಅರ್ಧ ಗಂಟೆ ಮತ್ತು ಹುಬ್ಬಳ್ಳಿಯಲ್ಲಿ ಒಂದು ಗಂಟೆ ಸಮಯವನ್ನು ಕಾಯ್ದಿರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಪಕ್ಷದಲ್ಲಿನ ಅಸಮಾಧಾನ, ರೆಬೆಲ್ ಚಟುವಟಿಕೆಗಳ ನಿಯಂತ್ರಣಕ್ಕೆ ಸೂಚನೆ ನೀಡಲಿದ್ದಾರೆ. ಅಲ್ಲದೆ ಯಡಿಯೂರಪ್ಪ ರಾಜ್ಯ ಪ್ರವಾಸ ಕುರಿತು ಸ್ಪಷ್ಟ ಸೂಚನೆ ಮೂಲಕ ಗೊಂದಲ ನಿವಾರಿಸುವ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಇರುವ 20 ತಿಂಗಳ ಸಮಯದಲ್ಲಿ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಲು ಬೇಕಾದ ಚಟುವಟಿಕೆ ನಡೆಸುವಂತೆ ಸಿಎಂ ಸೇರಿದಂತೆ ರಾಜ್ಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮತ್ತು ರೆಬೆಲ್​ಗಳಿಗೆ ಸ್ಪಷ್ಟ ಸಂದೇಶ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ತಾಕೀತು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ABOUT THE AUTHOR

...view details