ಬೆಂಗಳೂರು: ಲಾಕ್ಡೌನ್ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ಪಿಎಸ್ಐಯಿಂದ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದ ರಾಜು ಅವರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಇಲಾಖಾ ತನಿಖೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಹೊಸಕೋಟೆ ಟೌನ್ ಪೊಲೀಸ್ ಠಾಣೆಯಲ್ಲಿ ರಾಜು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಬ್ ಇನ್ಸ್ಪೆಕ್ಟರ್ ಹುದ್ದೆಯಿಂದ ಇನ್‌ಸ್ಪೆಕ್ಟರ್ ಆಗಿ ಇವರು ಬಡ್ತಿ ಪಡೆದಿದ್ದರು.
ಅಮಾನತಿಗೆ ಕಾರಣ ಏನು?
ಇನ್ಸ್ಪೆಕ್ಟರ್ ರಾಜು ಜೂನ್ 1ರಂದು ಠಾಣೆಯೊಳಗೆ ಠಾಣಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮ ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಭ್ರಮದ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿಯಾಗಿದ್ದ ರವಿ ಚೆನ್ನಣ್ಣನವರ್ ತನಿಖೆ ನಡೆಸಿ ವರದಿ ನೀಡಿದ್ದರು.
ಇನ್ಸ್ಪೆಕ್ಟರ್ ರಾಜು ಸಸ್ಪೆಂಡ್:
ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಪಾರ್ಟಿ ಮಾಡಿದ್ದ ವಿಚಾರವಾಗಿ ರವಿ ಚೆನ್ನಣ್ಣನವರ್ ನೀಡಿದ್ದ ವರದಿ ಆಧರಿಸಿ ಪ್ರವೀಣ್ ಸೂದ್ ಅವರು ಇನ್ಸ್‌ಪೆಕ್ಟರ್ ರಾಜು ಅವರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಇನ್ಸ್‌ಪೆಕ್ಟರ್ ರಾಜು ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ KEDA ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು. ಅಮಾನತು ಆಗಿರುವ ಇನ್ಸ್ಪೆಕ್ಟರ್ ರಾಜು ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.