ಬೆಂಗಳೂರು :ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನಾಗರಭಾವಿಯಲ್ಲಿ ಖಾಸಗಿ ಪ್ರಯೋಗಾಲಯ ನಡೆಸುತ್ತಿರುವ ಕೋವಿಡ್-19 ಪರೀಕ್ಷೆ ನಿಲ್ಲಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಅರ್ಜಿದಾರರು ಬಿಬಿಎಂಪಿಗೆ ದೂರು ಸಲ್ಲಿಸುವಂತೆಯೂ ಮತ್ತು ಪಾಲಿಕೆ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.
ಈ ಕುರಿತು ನಾಗರಭಾವಿ ನಿವಾಸಿಗಳಾದ ಎಸ್ ಗಂಗಪ್ಪ ಮತ್ತು ಶಿವಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ನಾಗರಭಾವಿ ಸಮೀಪದ ಕೇಂದ್ರ ಉಪಾಧ್ಯಾಯರ ಸಂಘ ಬಡಾವಣೆಯಲ್ಲಿರುವ ಮೆಡಿಕಲ್ ಡಯಾಗ್ನೋಸ್ಟಿಕ್ಸ್ ಅಂಡ್ ಸ್ಪೆಷಾಲಿಟಿ ಸೆಂಟರ್ ಎನ್ನುವ ಖಾಸಗಿ ಪ್ರಯೋಗಾಲಯವು ಕೋವಿಡ್-19 ಪರೀಕ್ಷೆ ನಡೆಸುತ್ತಿದೆ. ಆದರೆ, ಪ್ರಯೋಗಾಲಯದಲ್ಲಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.