ಬೆಂಗಳೂರು :ಕಚ್ಚಾ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೆಂಗಳೂರು ನಗರ ಸೇರಿದಂತೆ ದೇಶದ ಹಲವೆಡೆ ಇರುವ ಬಹುತೇಕ ಕೈಗಾರಿಕೆಗಳು ಸೋಮವಾರ ಬಂದ್ಗೆ ಕರೆ ಕೊಟ್ಟಿವೆ. ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯ ಕೈಗಾರಿಕಾ ಪ್ರದೇಶ ಕಚ್ಚಾ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಾಳೆ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.
ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್, ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್ ಹಾಗೂ ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್‌ಗಳು ಈ ಪ್ರತಿಭಟನೆಗೆ ಸಾಥ್ ನೀಡಲಿವೆ.
ಕಚ್ಚಾ ವಸ್ತುಗಳ ಬೆಲೆ ಶೇ. 40ರಿಂದ ಶೇಕಡಾ 70ರಷ್ಟು ಹೆಚ್ಚಾಗಿವೆ. ಏರಿಕೆಯಾಗುತ್ತಿರುವ ಬೆಲೆಯನ್ನು ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ, ರಾಷ್ಟ್ರಮಟ್ಟದಲ್ಲಿ ಕೈಗಾರಿಕೆ ಸ್ಥಗಿತಗೊಳಿಸಲು ಪೀಣ್ಯ ಕೈಗಾರಿಕಾ ಸಂಘ ತೀರ್ಮಾನ ಮಾಡಿದೆ ಎಂದು ಪೀಣ್ಯ ಕೈಗಾರಿಕಾ ಸಂಘ ಹೇಳಿದೆ.