ನವದೆಹಲಿ/ಬೆಂಗಳೂರು: ರಕ್ಕಸ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರಮುಖ ರಸ್ತೆಗಳು ಜವಾವೃತಗೊಂಡಿದ್ದರಿಂದ ವಾಹನ ಸವಾರರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಪ್ರವಾಹ ಪೀಡಿತ ಪ್ರದೇಶ, ಜಲಾವೃತಗೊಂಡಿರುವ ರಸ್ತೆಗಳನ್ನು ದಾಟಲು ಜನರು ಟ್ರ್ಯಾಕ್ಟರ್, ಬುಲ್ಡೋಜರ್ ಮೊರೆ ಹೋಗ್ತಿದ್ದಾರೆ. ಅಂತಹದೊಂದು ವಿಡಿಯೋ ಶೇರ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾ ಮನಸ್ಸಿದ್ದರೆ ಮಾರ್ಗ ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ತರಹೇವಾರಿ ವಿಡಿಯೋ, ಟ್ಟೀಟ್ ಮಾಡುತ್ತಿರುತ್ತಾರೆ. ಇದೀಗ ಬೆಂಗಳೂರಿನ ಪ್ರವಾಹ ಪ್ರದೇಶ ದಾಟಲು ಬುಲ್ಡೋಜರ್ ಬಳಕೆ ಮಾಡ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಭಾರಿ ಮಳೆಯಿಂದ ಬೆಂಗಳೂರು ಜಲಾವೃತ: ಟ್ರ್ಯಾಕ್ಟರ್ ಏರಿ ಕಚೇರಿ ತಲುಪಿದ ಐಟಿ ಸಿಬ್ಬಂದಿ
ಉದ್ಯಮಿ ಮಹೀಂದ್ರಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರವಾಹ ಪ್ರದೇಶ ದಾಟಲು ಕೆಲವರು ಬುಲ್ಡೋಜರ್ ಏರಿ ಕುಳಿತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇವರೆಲ್ಲರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಸಂಪೂರ್ಣವಾಗಿ ಜವಾವೃತಗೊಂಡು, ಜನರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ.
ಮುಖ್ಯವಾಗಿ, ಬೆಂಗಳೂರಿನ ಐಟಿ ಸಿಬ್ಬಂದಿ ಕಚೇರಿ ತಲುಪಲು ಟ್ರ್ಯಾಕ್ಟರ್ ಮೊರೆ ಹೋಗಿದ್ದಾರೆ. ಟ್ರ್ಯಾಕ್ಟರ್ಗಳಲ್ಲಿ ಪ್ರಯಾಣ ಬೆಳೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖ್ಯವಾಗಿ ಎಚ್ಎಎಲ್ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಯಮಲೂರು ರಸ್ತೆ ನೀರಿನಲ್ಲಿ ಮುಳುಗಿದೆ. ಈ ಪ್ರದೇಶದಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗೆ ತೆರಳಲು ಟ್ರ್ಯಾಕ್ಟರ್ ಬಳಸುತ್ತಿದ್ದಾರೆ.