ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಬಿ ವಿಚಾರಣೆ ಮುಗಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊರಬಂದಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಇಂದು ನಾನು ಬಂದಿದ್ದು ಸಿಸಿಬಿಯವರು ನೀಡಿದ ನೋಟಿಸ್ ಮೇರೆಗೆ. ವಿಚಾರಣೆ ವೇಳೆ 10-15 ಜನರ ಹೆಸರು ಹೇಳಿದ್ದು, ಅಶ್ಲೀಲ ವಿಡಿಯೋ ಸಂದೇಶ ಹಾಗೂ ಕೆಲ ದಾಖಲೆಗಳನ್ನ ನೀಡಿದ್ದೇನೆ. ಸದ್ಯ ನನಗೆ ಗೊತ್ತಿರುವ ಹಲವಾರು ಮಾಹಿತಿಗಳನ್ನ ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದು, ಪೊಲೀಸರಿಗೆ ಕೂಡ ನಾನು ಕೊಟ್ಟ ದಾಖಲೆಗಳು ಉಪಯೋಗವಾಗಲಿದೆ ಎಂದರು.
ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಖ್ಯಾತ ನಟ ನಟಿಯರ ಹೆಸರುಗಳನ್ನು ಇಲ್ಲಿ ಹೇಳಲು ಇಷ್ಟ ಪಡಲ್ಲ. ನಾನು ಬಂದಿರೋದು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ. ಇತ್ತೀಚೆಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ಗೆ ಅಡಿಕ್ಟ್ ಆಗ್ತಿದ್ದಾರೆ. ಸಮಾಜದಲ್ಲಿ ಡ್ರಗ್ಸ್ ಅನ್ನೋದು ಯುವಜನರನ್ನ ಹಾಳು ಮಾಡಿದೆ. ಸಮಾಜದಲ್ಲಿ ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಅರಿವಿರಬೇಕು. ಈ ಬಗ್ಗೆ ಎಲ್ಲರಿಗೂ ಸಂದೇಶ ಹೋಗಬೇಕು. ಡ್ರಗ್ಸ್ ಮಾಫಿಯಾವನ್ನ ಅಷ್ಟು ಸುಲಭವಾಗಿ ತಡೆಯಲು ಖಂಡಿತ ಸಾಧ್ಯವಿಲ್ಲ. ಆದರೆ ತನಿಖಾಧಿಕಾರಿಗಳಿಗೆ ನೀಡಬೇಕಾದ ವಿಚಾರವನ್ನು ತಲುಪಿಸಿದ್ದೇನೆ ಎಂದರು.