ಬೆಂಗಳೂರು:ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕುವುದು ಸೂಕ್ತವಲ್ಲ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ. ಜೊತೆಗೆ ಇದು ದ್ವೇಷದ ರಾಜಕಾರಣವಾಗುತ್ತದೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣ ಎಂದು ಹೆಸರಿಡಬೇಕು ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಬೆಂಗಳೂರಿನ ಮೇಲು ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, ಗುಜರಾತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಅರುಣ್ ಜೇಟ್ಲಿ ಅವರ ಹೆಸರು ಏಕೆ ಇಡಲಾಗಿದೆ? ಬದಲಿಸುವುದಾದರೆ ಈ ಹೆಸರುಗಳನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಲಿ ಎಂದು ಅವರು ಹೇಳಿದರು.
ಬಡವರು, ದಲಿತರ ಕಾಳಜಿ ಇಲ್ಲ:
ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದದರಾಮಯ್ಯ, ಮೇಜರ್ ಧ್ಯಾನ್‍ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು.
ರಾಜೀವ್‍ಗಾಂಧಿಯವರ ಹೆಸರೇಕೆ ಬದಲಿಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದವರ ನೆನಪಿಗೆ ರಾಷ್ಟ್ರೀಯ ನಾಯಕರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಈ ಮೊದಲು ಅಧಿಕಾರದಲ್ಲಿದ ಪಕ್ಷದವರು ನಾಮಕರಣ ಮಾಡಿದ ಹೆಸರು ಬದಲಾವಣೆ ಮಾಡುವುದು ದ್ವೇಷದ ರಾಜಕಾರಣ.
ಇಂದಿರಾ ಗಾಂಧಿಯವರು ಬಡವರ ಪರ ಶ್ರಮಿಸಿದ್ದರು. ಗರೀಬಿ ಹಠಾವೋ ಎಂದವರು. ಜೊತೆಗೆ ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದವರು. ಹೀಗಾಗಿ ಇಂದಿರಾ ಕ್ಯಾಂಟೀನ್‍ಗೆ ಅವರ ಹೆಸರು ಇಡಲಾಗಿದೆ.
ಬಿಜೆಪಿಗೆ ಬಡವರ ಬಗ್ಗೆಯೇ ಕಾಳಜಿ ಇಲ್ಲ. ಇದ್ದಿದ್ದರೆ ಬಡವರಿಗೆ ಕೊಡುತ್ತಿದ್ದ ಏಳು ಕೆ.ಜಿ. ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿದ್ದೇಕೆ? ಅವರಿಗೆ ದಲಿತರು, ಬಡವರು, ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದೆಯೇ? ಬಿಜೆಪಿಯವರು ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಪರ ಇರುವವರು. ಸಿ.ಟಿ. ರವಿ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಅವರು ಹೇಳಿದ್ದೇ ತೀರ್ಮಾನವಲ್ಲ. ಸರ್ಕಾರದ ನಿರ್ಧಾರ ಏನು ಎಂಬುದನ್ನು ನೋಡೋಣ ಎಂದರು.