ಬೆಂಗಳೂರು: ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ದಿನಬೆಳಗಾದರೆ ಅಶಾಂತಿಯ ಬೆಳವಣಿಗೆಗಳು ನಡೆಯುತ್ತಿದ್ದು, ಯಾರೂ ಕೂಡ ಬಂಡವಾಳ ಹೂಡಿಕೆ ಮಾಡಲು ಇಲ್ಲಿಗೆ ಬರುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ. ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇಡೀ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಶಕ್ತಿ ತುಂಬಿದ್ದು ಎಸ್.ಎಂ.ಕೃಷ್ಣಾ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆಗ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರಲಾಗಿತ್ತು ಎಂದು ಹೇಳಿದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಆಗಮಿಸಿದ ಸಂದರ್ಭದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿ, ವಿಶ್ವದ ನಾಯಕರು ದೆಹಲಿಗೆ ಬರಬೇಕಾದವರು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ತೆರಳುತ್ತಿದ್ದಾರೆ ಎಂದು ಹೇಳಿದ್ದರು. ಆಂಧ್ರಪ್ರದೇಶದವರು ಕೂಡ ಕಳೆದ 15 ವರ್ಷದಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ನಮ್ಮ ಜತೆ ಸ್ಪರ್ಧೆಗೆ ನಿಂತಿದ್ದಾರೆ. ದೊಡ್ಡ ಉದ್ಯಮಿಗಳನ್ನು ಅವರು ಆಕರ್ಷಿಸುತ್ತಿದ್ದಾರೆ. ಅದು ಅವರ ಕಾರ್ಯ. ನಾನು ಅದನ್ನು ಪ್ರಶ್ನಿಸುವುದಿಲ್ಲ.
ನಮ್ಮ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿರುವುದರಿಂದ ಉದ್ಯಮಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ಲಾಭವನ್ನು ಬೇರೆ ರಾಜ್ಯಗಳು ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿಗಳಾಗಲಿ, ಬೇರೆ ಮಂತ್ರಿಗಳಾಗಲಿ ಯಾರೂ ಕೂಡ ಈ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಕಿಡಿ ಕಾರಿದರು.