ಬೆಂಗಳೂರು :ಟಿವಿ ಹಾಗೂ ಪತ್ರಿಕೆಗಳಲ್ಲಿ ಸುದ್ದಿ ಅಥವಾ ಕಾರ್ಯಕ್ರಮದ ರೂಪದಲ್ಲಿ ಅಸಭ್ಯ, ಅಶ್ಲೀಲ ಮಾಹಿತಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲು ಶಾಸನಾತ್ಮಕ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಈ ಕುರಿತು ಸಲ್ಲಿಸಿರುವ ಪಿಐಎಲ್ ವಿಚಾರಣೆ ಪೂರ್ಣಗೊಳಿಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಎಚ್ಚರಿಕೆ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತನಿಖೆ ಪೂರ್ಣವಾಗುವವರೆಗೆ ಅದಕ್ಕೆ ಸಂಬಂಧಿಸಿದ ಮಾಹಿತಿ, ಆರೋಪಿಗಳು ಅಥವಾ ಸಂತ್ರಸ್ತರ ವಿವರಗಳನ್ನು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡಬಾರದು ಎಂದು ಜೂನ್ 15ರಂದು ಪೀಠ ಆದೇಶಿಸಿತ್ತು. ಆ.11ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ, ನಿಯಮ ಉಲ್ಲಂಘಿಸುವ ಪೊಲೀಸರ ವಿರುದ್ಧ ಸೂಕ್ತ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿತ್ತು.
ಆದರೆ, ಆದೇಶ ಪಾಲಿಸಿಲ್ಲ. ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ ಈ ಕುರಿತು ಸೂಕ್ತ ಎಚ್ಚರಿಕೆ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ವಿಚಾರಣೆ ಪೂರ್ಣಗೊಳಿಸಿರುವುದಾಗಿ ತಿಳಿಸಿ, ತೀರ್ಪು ಕಾಯ್ದಿರಿಸಿತು.
ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಅಶ್ಲೀಲ ಮಾಹಿತಿಯನ್ನು ಸುದ್ದಿ ರೂಪದಲ್ಲಿ ಅಥವಾ ಕಾರ್ಯಕ್ರಮ ರೂಪದಲ್ಲಿ ಪ್ರಸಾರ ಅಥವಾ ಪ್ರಕಟ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಈ ಸಂಬಂಧ ಶಾಸನಬದ್ಧ ನಿಯಮಗಳನ್ನು ರೂಪಿಸಬೇಕು. ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುವ ವಿಚಾರಗಳನ್ನು ವಿಶ್ಲೇಷಣೆಗೆ ಒಳಪಡಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.