ಬೆಂಗಳೂರು :ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದ್ದು, ಕೊರೊನಾ ಬಳಿಕ ರಾಜ್ಯದಲ್ಲಿ ಸುಮಾರು 2008 ಪ್ರಕರಣ ದಾಖಲಾಗಿವೆ. ಜೊತೆಗೆ ಪ್ರಕರಣಗಳನ್ನು ಬೇಧಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂಕಿ-ಅಂಶಗಳನ್ನು ಆಧರಿಸಿದ್ರೆ ದಿನಕ್ಕೆ 10-15 ಪ್ರಕರಣ ಪ್ರತಿದಿನ ಕಂಡು ಬರುತ್ತಿವೆ ಎನ್ನಲಾಗುತ್ತಿದೆ.
ಕೋವಿಡ್-19 ಬಳಿಕ ಎಂಎನ್ಸಿ ಕಂಪನಿಗಳು ನಷ್ಟದ ಕೂಪಕ್ಕೆ ಹೋಗಿವೆ. ಕಾರಣ ಬಹುತೇಕ ಕಂಪನಿಗಳು ಲಕ್ಷಾಂತರ ಮಂದಿಯನ್ನು ನಿರುದ್ಯೋಗಿಗಳಾಗಿ ಮಾಡಿವೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಗುವಂತಹ ವೆಬ್ಸೈಟ್ ಹಾಗೂ ಆನ್ಲೈನ್ ಆ್ಯಪ್ಗಳ ಮೂಲಕ ತಮಗೆ ಬೇಕಾದಂತಹ ಕೆಲಸದ ಹುಡುಕಾಟಕ್ಕೆ ಕೈ ಹಾಕಿದ್ದಾರೆ.
ವೆಬ್ಸೈಟ್ ಹಾಗೂ ಆನ್ಲೈನ್ ಆ್ಯಪ್ಗಳನ್ನು ಒತ್ತಿದ ತಕ್ಷಣ ಬರುವ ಅನಾಮಿಕ ಕರೆಗಳಿಂದ ಹತ್ತಿಪ್ಪತ್ತು ರೂಪಾಯಿಗಳ ಫಾರಂ ತುಂಬುವಂತೆ ಹೇಳಿ ಬ್ಯಾಂಕ್ ಖಾತೆಯ ವಿವರ, ನಂತರ ಒಟಿಪಿ ಪಡೆದುಕೊಳ್ಳುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ನಲ್ಲಿರುವ ಸಂಪೂರ್ಣ ಹಣವನ್ನು ಎಗರಿಸುತ್ತಿದ್ದಾರೆ. ದಕ್ಷಿಣ ಮತ್ತು ಉತ್ತರ ವಿಭಾಗಗಳ ಠಾಣೆಗಳಲ್ಲಿ ಅಂತಹ ಪ್ರಕರಣ ಅಧಿಕವಾಗಿ ದಾಖಲಾಗಿವೆ.
ವಿದ್ಯಾವಂತರೇ ಹೆಚ್ಚು :ಠಾಣೆಗಳಲ್ಲಿ ದಾಖಲಾಗಿರುವ ದೂರುಗಳತ್ತ ಕಣ್ಣಾಡಿಸಿದ್ರೆ ವಿದ್ಯಾವಂತರೇ ಮೋಸಕ್ಕೆ ಒಳಗಾಗಿರುವುದು ಕಂಡು ಬಂದಿದೆ. ಕಂಪನಿಗಳು ಕೆಲಸದಿಂದ ತೆಗೆದು ಹಾಕಿದ ನಂತರ ಬೇಕಾದ ಕೆಲಸ ಸಿಗದಿದ್ದಾಗ ವೆಬ್ಸೈಟ್ಗಳತ್ತ ದೃಷ್ಟಿ ಹಾಯಿಸುತ್ತಾರೆ. ಅದರಲ್ಲಿ ಮೋಸದ ಬಲೆಗೆ ಒಳಗಾದವರ ಪ್ರಕರಣಗಳಲ್ಲಿ ಶೇ.2ರಷ್ಟು ಅಪರಾಧ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ತಜ್ಞರು ಹಂಚಿಕೊಂಡ ಮಾಹಿತಿ
- ಯಾವುದೇ ಕೆಲಸಕ್ಕೆ ಅರ್ಜಿ ಹಾಕದಿದ್ದಾಗ ಬರುವ ಅನಾಮಿಕ ಕರೆಗಳಿಗೆ ಹೆಚ್ಚು ಜಾಗ್ರತೆಯಿಂದ ಉತ್ತರಿಸಬೇಕು
- ಸಂದರ್ಶನದ ಶುಲ್ಕ ಎಂದು ಕೇಳಿದಾಗ ಕೊಡಬೇಡಿ
- ಆಧಾರ್, ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್, ಒಟಿಪಿ, ಬ್ಯಾಂಕ್ ಖಾತೆ ವಿವರ ನೀಡಬಾರದು
- ಕೆಲಸದ ಅನಿವಾರ್ಯತೆ ಸಂದರ್ಭದಲ್ಲಿ ಇ-ಮೇಲ್ ಮೂಲಕ ಬಂದ ಕೆಲಸಗಳಿಗೆ ಸಂಬಂಧಿಸಿದಂತೆ ವೆಬ್ಸೈಟ್, ಕಂಪನಿ ಸಂಪೂರ್ಣ ವಿವರ ಕಲೆಹಾಕಿ
- ಕೆಲ ಕಂಪನಿ ಸ್ಯಾಲರಿ ಪ್ಯಾಕೆಜ್ ಜಾಸ್ತಿ ಇದೆ ಎಂದು ನಂಬಿಸುತ್ತಾರೆ. ಅದನ್ನು ನಂಬಿ ವೈಯಕ್ತಿಕ ವಿಚಾರ ಹಂಚಿಕೊಳ್ಳಬಾರದು
- ಕೆಲಸದ ಹುಡುಕಾಟ ಮಾಡುವಾಗ ಕಂಪನಿಯ ಇ-ಮೇಲ್, ಕಂಪನಿ ಫೀಡ್ಬ್ಯಾಕ್ ಗಮನಿಸಬೇಕು
- ಟೆಲಿಪೋನ್ ಸಂದರ್ಶನ ಬಂದಾಗ ನಾವೇ ಕರೆ ಮಾಡಲು ಹೊಗಬಾರದು. ಅವರಾಗಿಯೇ ಕರೆ ಮಾಡಿದಾಗ ಸ್ವೀಕರಿಸಬೇಕು
- ಕೆಲಸಕ್ಕಾಗಿ ₹10 ಅಪ್ಲಿಕೇಷನ್ ತುಂಬಲು ಹೇಳಿದಾಗ ತಕ್ಷಣ ಅದರಲ್ಲಿ ಮಾಹಿತಿ ತುಂಬಬೇಡಿ. ಎಚ್ಚರವಹಿಸಿ...
- ಏನೇ ಆಗಲಿ ಪ್ರತಿಯೊಂದು ವಿಚಾರ ತಿಳಿದ ಬಳಿಕವೇ ಮಾಹಿತಿ ಹಂಚಿಕೊಳ್ಳಬೇಕು