ಕರ್ನಾಟಕ

karnataka

ETV Bharat / city

ವಿಧಾನಸಭೆ ಚುನಾವಣೆ: 1 ವರ್ಷಕ್ಕೂ ಮುನ್ನವೇ ಕಾಂಗ್ರೆಸ್​ನಲ್ಲಿ ಹೆಚ್ಚುತ್ತಿದೆ ಸಿಎಂ ಆಕಾಂಕ್ಷಿಗಳ ಪಟ್ಟಿ - ಕೆಪಿಸಿಸಿ ಅಧ್ಯಕ್ಷ ಡಿ ಕೆಶಿವಕುಮಾರ್

ಇನ್ನೊಂದು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್​ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್​ ನಾಯಕರು
ಕಾಂಗ್ರೆಸ್​ ನಾಯಕರು

By

Published : Jun 19, 2022, 1:29 PM IST

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಲು ಆರಂಭಿಸಿದೆ. ಎಐಸಿಸಿ ವರಿಷ್ಠರ ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ಮುಂದಿನ ಸಿಎಂ ಆಕಾಂಕ್ಷಿಗಳ ಧ್ವನಿ ದೊಡ್ಡದಾಗಿಯೇ ಕೇಳಿಬರುತ್ತಿದೆ. ಕೆಲ ನಾಯಕರು ನೇರವಾಗಿ ಹಾಗೂ ಮತ್ತೆ ಕೆಲವರು ತಮ್ಮ ಬೆಂಬಲಿಗರ ಮೂಲಕ ತಾವೇ ಮುಂದಿನ ಸಿಎಂ ಎಂದು ಕರೆಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.

ಕೆಲ ತಿಂಗಳ ಹಿಂದೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಜಿ. ಪರಮೇಶ್ವರ್, ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದರು. ಒಂದು ಹಂತಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಲು ಸಹ ಈ ವಿಚಾರ ಕಾರಣವಾಗಿತ್ತು. ಸಿಎಂ ಆಕಾಂಕ್ಷಿ ನಾಯಕರ ಮೇಲಾಟದಿಂದ ಬೇಸತ್ತ ಕಾಂಗ್ರೆಸ್ ಹೈಕಮಾಂಡ್, ಯಾವುದೇ ಕಾರಣಕ್ಕೂ ಮುಂದಿನ ಸಿಎಂ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಬಾರದು. ತಮ್ಮ ಬೆಂಬಲಿಗರ ಬಾಯಿಯನ್ನು ಸಹ ತಾವೇ ಮುಚ್ಚಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದಾದ ಬಳಿಕ ಕೆಲ ದಿನ ಸುಮ್ಮನಿದ್ದ ನಾಯಕರು, ನಿಧಾನವಾಗಿ ಮತ್ತೆ ತಮ್ಮ ಆಕಾಂಕ್ಷೆಯನ್ನು ಹೊರಗೆಡವುತ್ತಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ಹೊರತುಪಡಿಸಿ ಉಳಿದ ನಾಯಕರು ಮಾತಿಗೆ ಬೆಲೆಕೊಟ್ಟು ಸುಮ್ಮನಿದ್ದರು. ಆದರೆ, ಇದೀಗ ಇತರೆ ನಾಯಕರು ಸಹ ಸಿಎಂ ಗಾದಿಯತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದೇವೆ ಅಧಿಕಾರಕ್ಕೆ ಬಂದರೆ ಯಾಕೆ ಸಿಎಂ ಆಗಬಾರದು ಎಂಬ ಮಾತನ್ನು ಆಡುತ್ತಿದ್ದಾರೆ. ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಸಾಕಷ್ಟು ಒತ್ತಡಕ್ಕೆ ಸಿಲುಕಿರುವ ಪಕ್ಷದ ಹೈಕಮಾಂಡ್ ನಾಯಕರು ಕೇಂದ್ರದಲ್ಲಿಯೇ ತಮ್ಮ ಬಲ ಕುಗ್ಗಿಸಿಕೊಂಡಿದ್ದು, ರಾಜ್ಯ ನಾಯಕರುಗಳಿಗೆ ಖಡಕ್ ಸಂದೇಶ ನೀಡುವ ನಿಟ್ಟಿನಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಇದು ವಿಧಾನಸಭೆ ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ರಾಜ್ಯ ನಾಯಕರಲ್ಲಿ ಮುಖ್ಯಮಂತ್ರಿಯಾಗುವ ಕನಸು ಗರಿಗೆದರುವಂತೆ ಮಾಡಿದೆ.

ಇದನ್ನೂ ಓದಿ:ಚುನಾವಣೆಗೆ ಒಂದು ವರ್ಷ ಬಾಕಿ ಇದೆ, ಸಿಎಂ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ದ : ರೇಣುಕಾಚಾರ್ಯ

ಕಳೆದ ತಿಂಗಳು ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಜೊತೆ ಚರ್ಚೆಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷಕ್ಕೆ ಹೊರಗಿನಿಂದ ಬಂದವರು ಸಿಎಂ ಆಗುವ ಅವಕಾಶ ಇರುವಾಗ, ಕಾಂಗ್ರೆಸ್ ಪಕ್ಷಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಶ್ರಮಿಸಿರುವ ನಮಗೆ ಸಿಎಂ ಆಗುವ ಆಸೆ ಇರಬಾರದೆ?, ಇನ್ನೆಷ್ಟು ದಿನ ನಾವು ಅಧಿಕಾರದಿಂದ ದೂರ ಉಳಿಯಬೇಕು ಎಂಬ ಪ್ರಶ್ನೆ ಮಾಡಿದ್ದರು.

ಇನ್ನೊಂದೆಡೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಸಹ ಕಳೆದ ಒಂದು ತಿಂಗಳಿಂದ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗನ್ನು ಹೊರಡಿಸುತ್ತಿದ್ದು, ಸ್ವತಃ ಸಿದ್ದರಾಮಯ್ಯ ಅವರೇ ತಾವು ಮುಖ್ಯಮಂತ್ರಿಯಾಗಿದ್ದಾಗ ತಂದ ಅಭಿವೃದ್ಧಿ ಕಾರ್ಯಗಳನ್ನು ನೆನೆದು ಮತ್ತೊಮ್ಮೆ ಇವುಗಳನ್ನ ಜಾರಿಗೆ ತರುವ ಆಶಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಾವು ಸಿಎಂ ಆಕಾಂಕ್ಷಿ ಎಂಬುದನ್ನ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ಹೈಕಮಾಂಡ್ ನಾಯಕರ ಜೊತೆ ಸಂಪರ್ಕ ಹೊಂದಿರುವ ಬಿ.ಕೆ ಹರಿಪ್ರಸಾದ್ ಮತ್ತು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸಹ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿ ಗೋಚರಿಸುತ್ತಿದ್ದಾರೆ. ಇವರಲ್ಲದೆ ಇನ್ನೂ ಕೆಲ ನಾಯಕರು ತೆರೆಮರೆಯಲ್ಲಿ ಮುಖ್ಯಮಂತ್ರಿ ಗಾದಿ ಏರುವ ಪ್ರಯತ್ನ ಆರಂಭಿಸಿದ್ದು, ಪಕ್ಷದ ಹೈಕಮಾಂಡ್ ನಾಯಕರ ಸೂಚನೆಗೆ ಯಾವುದೇ ಬೆಲೆ ಕೊಡದೆ ತಮ್ಮದೇ ಆದ ವೇದಿಕೆಗಳಲ್ಲಿ ಸಿಎಂ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಖಚಿತ, ಕ್ಷೇತ್ರ ನಿರ್ಧಾರವಾಗಿಲ್ಲ : ಯಡಿಯೂರಪ್ಪ

ಕಳೆದ ಕೆಲ ತಿಂಗಳಿಂದ ಕ್ಷೇತ್ರದಲ್ಲಿಯೇ ಹೆಚ್ಚಾಗಿ ಓಡಾಡಿಕೊಂಡಿದ್ದ ಪರಮೇಶ್ವರ್, ಇತ್ತೀಚಿನ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್ ಪ್ರತ್ಯೇಕ ಪ್ರಚಾರ ತಂಡವನ್ನು ರಚಿಸಿಕೊಂಡು ತಮ್ಮದೇ ಆದ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿ ಪ್ರವೇಶ ಪಡೆದ ಬಿ.ಕೆ.ಹರಿಪ್ರಸಾದ್ ಸದ್ಯ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತೆರೆಮರೆಯಲ್ಲಿ ಮುಂದಿನ ಸಿಎಂ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶ ಹೊಂದಿದ್ದು, ಪಕ್ಷದಲ್ಲಿ ಸಂಘಟಿತ ಹೋರಾಟ ನಡೆಸಿ ಅಧಿಕಾರಕ್ಕೆ ತರುವ ಪ್ರಯತ್ನ ಕಾಣಸಿಗುತ್ತಿಲ್ಲ. ಪ್ರತಿಯೊಬ್ಬ ನಾಯಕರು ತಮ್ಮದೇ ಆದ ಪ್ರತ್ಯೇಕ ಬಣ ನಿರ್ಮಿಸಿಕೊಂಡು ಮುಂದಿನ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿ ಗೋಚರಿಸುತ್ತಿದ್ದಾರೆ.

ಜಾರಿ ನಿರ್ದೇಶನಾಲಯದ ತನಿಖೆಯ ಒತ್ತಡ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಎದುರಾಗಿರುವ ಸೋಲು ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಬಲ ಕುಗ್ಗಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಕೈ ನಾಯಕರಿಗೂ ಸಂಘಟಿತ ಹೋರಾಟದ ಕಟ್ಟುನಿಟ್ಟಿನ ಸೂಚನೆಯನ್ನು ನೀಡುತ್ತಾರಾ? ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗಾಗಿ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆಂಬುದು ಸುಳ್ಳು : ಕುಮಾರಸ್ವಾಮಿ

ABOUT THE AUTHOR

...view details