ಬೆಂಗಳೂರು :ಕಳೆದೆರಡು ವರ್ಷದಿಂದ ಕೋವಿಡ್‌ನಿಂದಾಗಿ ಇಡೀ ವಿಶ್ವವೇ ವರ್ಕ್ ಫ್ರಮ್ ಹೋಮ್ ಕಾನ್ಸೆಪ್ಟ್‌ಗೆ ಒಗ್ಗಿಕೊಂಡಿತ್ತು. ಇದರಿಂದ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರಿಂದ ವಾತಾವರಣದಲ್ಲಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಬಂದಿತ್ತು. ಹೀಗಾಗಿ, ಅಸ್ತಮಾ, ವೀಸಿಂಗ್, ಸೈನಸ್, ಕೆಮ್ಮು, ಉಸಿರಾಟದಂಥ ಸಮಸ್ಯೆಗಳೇ ಕುಸಿದಿತ್ತು. ಆದರೀಗ, ಬಹುತೇಕ ಎಲ್ಲಾ ಕಂಪನಿಗಳು ವಾರದಲ್ಲಿ ಎರಡರಿಂದ ಮೂರು ದಿನ ಕಡ್ಡಾಯವಾಗಿ ಕಚೇರಿಗೆ ಬರಲು ಆಹ್ವಾನಿಸಿದ್ದೇ ತಡ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಅದೆಷ್ಟೋ ಜನರಲ್ಲಿ ಮತ್ತದೇ ಅಸ್ತಮಾ, ವೀಸಿಂಗ್, ಸೈನಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಕೋವಿಡ್ ಕಾರಣದಿಂದಾಗಿ ಜನ ಪೊಲ್ಯೂಷನ್‌ಗೆ ತೆರೆದುಕೊಳ್ಳದ ಕಾರಣ ಶ್ವಾಸಕೋಶದ ಸಮಸ್ಯೆಗಳು ಇಳಿಮುಖವಾಗಿತ್ತು. ಇದೀಗ ಪ್ರತಿಯೊಬ್ಬರು ತಮ್ಮ ಖಾಸಗಿ ವಾಹನಗಳಿಂದ ರಸ್ತೆಗಿಳಿಯುತ್ತಿರುವ ಕಾರಣ ಎಲ್ಲಾ ವಾಯುಮಾಲಿನ್ಯ ಹಿಂದಿಗಿಂತಲೂ ದುಪ್ಪಟ್ಟಾಗುತ್ತಿದೆ. ಇದರ ಪರಿಣಾಮ ಬಹುತೇಕರಲ್ಲಿ ಅಸ್ತಮಾದಂಥ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ವಿವೇಕ್ ಆನಂದ್ ಪಡೇಗಲ್ ಕೆಲ ಸಲಹೆ ನೀಡಿದ್ದಾರೆ.
ಮಾಸ್ಕ್ ಧರಿಸುವುದನ್ನು ನಿಲ್ಲಿಸದಿರಿ :ಕೋವಿಡ್ ಕಾರಣದಿಂದಾಗಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಸರ್ಕಾರವೇ ಕಡ್ಡಾಯ ಮಾಡಿತ್ತು. ಇದು ಕೇವಲ ಕೋವಿಡ್ ಅಷ್ಟೇ ಅಲ್ಲದೇ ಇತರೆ ಆರೋಗ್ಯ ಸಮಸ್ಯೆಗಳಿಂದ ರಕ್ಷಾ ಕವಚವಾಗಿ ಕೆಲಸ ಮಾಡುತ್ತಿದೆ. ಇದೀಗ ಬೇಸಿಗೆ ಆಗಿರುವ ಕಾರಣ ಎಲ್ಲೆಡೆ ಧೂಳು, ಪ್ರದೂಷಣೆ ಹೆಚ್ಚು. ಇದನ್ನು ನಿಯಂತ್ರಿಸಲು ಕಡ್ಡಾಯವಾಗಿ ಎನ್ 95 ಮಾಸ್ಕ್ ಧರಿಸುವುದು ಮೊದಲ ಮುನ್ನೆಚ್ಚರಿಕೆಯಾಗಿದೆ. ಇದರಿಂದ ಡಸ್ಟ್ ಹಾಗೂ ಶ್ವಾಸಕೋಶಕ್ಕೆ ಅಲರ್ಜಿ ಉಂಟು ಮಾಡುವ ಕಣಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ, ಕೋವಿಡ್ ಕಡಿಮೆಯಾದರೂ ಅಸ್ತಮಾ, ಉಸಿರಾಟದ ಸಮಸ್ಯೆ ಇರುವವರು ಮಾಸ್ಕ್ ಧರಿಸಿ.
ಅಸ್ತಮಾದ ಲಕ್ಷಣಗಳೇನು?:ಸತತವಾಗಿ ಒಣಕೆಮ್ಮು ಬರುವುದು, ಉಸಿರಾಡಲು ಕಷ್ಟ. ಎದೆಯ ಭಾಗದಲ್ಲಿ ಬಿಗಿದಂತಾಗುವುದು, ಕಫ ಹೆಚ್ಚಳ ಈ ಲಕ್ಷಣ ಕಂಡು ಬಂದರೆ ಇದು ಅಸ್ತಮಾ ಎನ್ನುವುದು ಖಚಿತ. ರಾತ್ರಿ ಸಂದರ್ಭದಲ್ಲಿ ಕೆಮ್ಮು ಹೆಚ್ಚಳವಾಗುತ್ತಿದ್ದರೆ ತಡ ಮಾಡದೇ ವೈದ್ಯರನ್ನು ಭೇಟಿ ಮಾಡಿ. ಇಲ್ಲವಾದರೆ ಇದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು.