ಬೆಂಗಳೂರು: ಕೊರೊನಾ ಬಿಕ್ಕಟ್ಟಿನಿಂದ ಲಾಕ್ ಡೌನ್ ತೆರವುಗೊಳಿಸಿದರೂ ಕಳೆದ ಎರಡು ವರ್ಷಗಳಿಂದ ಶಾಲೆಗಳು ಭೌತಿಕವಾಗಿ ಆರಂಭವಾಗಿಲ್ಲ. ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಗೆ ಪೋಷಕರು ಸ್ಮಾರ್ಟ್ ಫೋನ್ ನೀಡಿದ್ದಾರೆ. ಇದರಿಂದ ಲಾಕ್ ಡೌನ್ ವೇಳೆ ಇಂಟರ್ನೆಟ್ನಲ್ಲಿ ಆಶ್ಲೀಲ ವಿಡಿಯೋ ನೋಡುವವರ ಸಂಖ್ಯೆ ಅಧಿಕವಾಗಿದ್ದು, ಇದನ್ನು ನಿಯಂತ್ರಿಸಲು ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ವಿಶೇಷವಾಗಿ ಮಕ್ಕಳ ಪೋರ್ನ್ (ಆಶ್ಲೀಲ) ವಿಡಿಯೋ ವೀಕ್ಷಣೆ ಲಾಕ್ ಡೌನ್ ವೇಳೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಮಕ್ಕಳು ಹಾಗೂ ಹದಿಹರೆಯದ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಅಶ್ಲೀಲ ವಿಡಿಯೋ ನೋಡಿರುವುದನ್ನು ಸಿಐಡಿಯ ಸೈಬರ್ ಪೊಲೀಸರು ಪತ್ತೆಹಚ್ಚಿದ್ದಾರೆ.
ಲಾಕ್ ಡೌನ್ ವೇಳೆ ಹೆಚ್ಚು ಪೋರ್ನ್ ವಿಡಿಯೋ ವೀಕ್ಷಣೆ
ಲಾಕ್ ಡೌನ್ ವೇಳೆ ಹೆಚ್ಚಾಗಿ ಮಕ್ಕಳೇ ಆಶ್ಲೀಲ ವಿಡಿಯೋ ನೋಡಿದ್ದಾರೆ. ಕಳೆದ ತಿಂಗಳಲ್ಲಿ ಪೋರ್ನ್ ವಿಡಿಯೋ ವೀಕ್ಷಣೆ ಮಾಡಿದ್ದವರನ್ನು ಸಿಐಡಿ ಪತ್ತೆ ಹಚ್ಚಿದ್ದು, ರಾಜ್ಯಾದ್ಯಂತ ಸುಮಾರು 200 ಜನರನ್ನು ವಿಚಾರಣೆ ಮಾಡಲು ಮುಂದಾಗಿದೆ. ಬೆಂಗಳೂರಿನಲ್ಲಿಯೇ 60ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಯಾವ ಮೊಬೈಲ್ ನಂಬರ್ ನಿಂದ ವಿಡಿಯೋ ನೋಡಿದ್ದಾರೊ ಆ ಮೊಬೈಲ್ ಮಾಲೀಕ ಬಂಧನವಾಗುವ ಸಾಧ್ಯತೆಯಿದೆ.
18 ವರ್ಷದ ಒಳಗಿನ ಮಕ್ಕಳು ವಿಡಿಯೋ ನೋಡಿದ್ದರೆ ಪೋಷಕರಿಗೆ ಸಂಕಷ್ಟ ಎದುರಾಗಲಿದೆ. ಆಶ್ಲೀಲ ವಿಡಿಯೋ ನೋಡುವವರನ್ನು ನಿಯಂತ್ರಣ ಹಾಗೂ ಅವರ ಗುರುತು ಪತ್ತೆ ಮಾಡುವುದಕ್ಕೆ ಸೈಬರ್ ಅಧಿಕಾರಿಗಳ ತಾಂತ್ರಿಕ ತಂಡ ಸಿದ್ಧವಾಗಿದ್ದು, ಅಂತಹ ವಿಡಿಯೋ ನೋಡೋರನ್ನ ಈ ತಂಡ ಪತ್ತೆ ಮಾಡಲಿದೆ.