ಬೆಂಗಳೂರು: ಅನ್‌ಲಾಕ್ ಬಳಿಕ ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮತ್ತೊಂದೆಡೆ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ.
ಲಾಕ್ಡೌನ್ ಅವಧಿಯಲ್ಲಿ ಕಳ್ಳತನ ಪ್ರಕರಣಗಳಿಗೆ ಸ್ವಯಂ ಬ್ರೇಕ್ ಹಾಕಿಕೊಂಡಿದ್ದ ಖದೀಮರು ಅನ್‌ಲಾಕ್ ಆಗುತ್ತಿದ್ದಂತೆ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿ ಓಡಾಡುವವರನ್ನು ಹಾಗೂ ಜನಸಂದಣಿ ಪ್ರದೇಶಗಳಲ್ಲಿರುವವರನ್ನು ಯಾಮಾರಿಸಿ ಕಳ್ಳತನ ಮಾಡುತ್ತಿದ್ದಾರೆ. ಅನ್‌ಲಾಕ್ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20 ಕ್ಕಿಂತ ಅಧಿಕ ಮೊಬೈಲ್ ಕಳ್ಳತನ ಪ್ರಕರಣ ವರದಿಯಾಗಿವೆ.
ಬೆದರಿಸಿ ಮೊಬೈಲ್ ಕಳ್ಳತನ:
ಬೆಳಗ್ಗೆ ಹಾಗೂ ರಾತ್ರಿ ಅವಧಿಯಲ್ಲಿ ಒಂಟಿಯಾಗಿ ಓಡಾಡುವರನ್ನು ಗುರಿಯಾಗಿಸಿಕೊಂಡಿರುವ ಖದೀಮರು, ಅವರನ್ನು ಹಿಂಬಾಲಿಸಿ ಚಾಕು ತೋರಿಸಿ, ಹೆದರಿಸಿ ಮೊಬೈಲ್ ಸೇರಿದಂತೆ ಕೈಗೆ ಸಿಗುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಜನಸಂದಣಿ ಪ್ರದೇಶಗಳಲ್ಲಿ ತುರ್ತು ಕರೆ ಮಾಡಬೇಕು ಎಂದು ಸಾರ್ವಜನಿಕರಿಂದ ಮೊಬೈಲ್ ಪಡೆದು ಸುಲಭವಾಗಿ ತಮ್ಮ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದಾರೆ.
ಇನ್ನು ಮೊಬೈಲ್ ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಐಎಂಇ ನಂಬರ್ ಆಧಾರದ ಮೇಲೆ ಸಹ ಪೊಲೀಸರು ಟ್ರ್ಯಾಕ್ ಮಾಡಲಿದ್ದಾರೆ. ಸಾಮಾನ್ಯವಾಗಿ ದೂರು ಪಡೆದ ಬಳಿಕ 15 ರಿಂದ 20 ದಿನದವರೆಗೆ ಮಾತ್ರ ಪೊಲೀಸರು ಟ್ರ್ಯಾಕ್ ಮಾಡುತ್ತಾರೆ. ನಂತರ ತನಿಖೆ ಮಂದಗತಿಯಲ್ಲಿ ನಡೆಸಲಾಗುತ್ತದೆ. ಹೊಯ್ಸಳ ಹಾಗೂ ಗಸ್ತು ಪೊಲೀಸರು ಸಹ ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.