ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳು ರಾಜ್ಯದಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಈ ವೇಳೆ ಕೌಟುಂಬಿಕ ಕಲಹ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ.
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದರಿಂದ ಗಂಡ-ಹೆಂಡತಿ ಜಗಳ, ಮಕ್ಕಳಿಗಾಗಿ ವಿಚ್ಛೇದನ ಪಡೆದ ದಂಪತಿ ಗಲಾಟೆ, ಅಡುಗೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯರ ಮೇಲೆ ಹಲ್ಲೆ ಸೇರಿದಂತೆ ವಿವಿಧ ರೀತಿಯ ಕೌಟುಂಬಿಕ ಕಲಹ ಪ್ರಕರಣಗಳು ವರದಿಯಾಗಿವೆ. ಕಿರುಕುಳ ತಾಳಲಾರದೆ ಲಾಕ್ಡೌನ್ ವೇಳೆ ವನಿತಾ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ನೊಂದ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಲ್ಲೇಶ್ವರ ಠಾಣೆಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರಕ್ಕೆ ಸಾಮಾನ್ಯ ದಿನಗಳಲ್ಲಿ ಅನ್ಯಾಯಕ್ಕೆ, ಶೋಷಣೆಗೆ ಒಳಗಾದವರು ಹೋಗಿ ದೂರು ನೀಡುತ್ತಿದ್ದರು. ಆದರೆ ಲಾಕ್ಡೌನ್ ವೇಳೆ ನೊಂದ ಮಹಿಳೆಯರು ಫೋನ್ ಮೂಲಕವೇ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಪ್ರತಿದಿನ 20 ಕ್ಕೂ ಹೆಚ್ಚು ಕರೆಗಳು ಬರುತ್ತಿತ್ತು. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ 210 ದೂರುಗಳು ದಾಖಲಾಗಿವೆ. ಈ ಪೈಕಿ ಬಹುತೇಕ ದೂರುಗಳನ್ನು ಫೋನ್ ಮುಖಾಂತರ ಕೌನ್ಸಿಲಿಂಗ್ ಮಾಡಿಸಿ ಇತ್ಯರ್ಥ ಪಡಿಸಲಾಗಿದೆ ಎಂದು ಪರಿಹಾರ ಕೇಂದ್ರದ ಮುಖ್ಯಸ್ಥೆ ರಾಣಿ ಶೆಟ್ಟಿ ತಿಳಿಸಿದ್ದಾರೆ.
ಕೌಟುಂಬಿಕ ಕಲಹಗಳಲ್ಲಿ ಹೆಂಡತಿಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳೇ ಹೆಚ್ಚಾಗಿವೆ. ಸಣ್ಣ-ಪುಟ್ಟ ವಿಚಾರಕ್ಕೆ ಪತ್ನಿಯರ ಮೇಲೆ ಮಾರಣಾಂತಿಕ ಹಲ್ಲೆ ಆಗಿರುವುದು ಕೂಡ ವರದಿಯಾಗಿದೆ.
- ಹೇಳಿದ ಅಡುಗೆ ಮಾಡಲಿಲ್ಲವೆಂದು ಪತ್ನಿಗೆ ಮನಬಂದಂತೆ ಪತಿ ಥಳಿತ