ಬೆಂಗಳೂರು :ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ನಿಯಂತ್ರಣ ಸಾಧ್ಯವಿಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ತಕ್ಕಂತೆ ದರ ನಿಗದಿಯಾಗುತ್ತಿರುವುದರಿಂದ ನಾವು ನಿಯಂತ್ರಣ ಮಾಡಲಯ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅಸಹಾಯತೆ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಅವರ ದಿನಬಳಕೆ ವಸ್ತುಗಳ ಬೆಲೆ ಎರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿಲ್ಲ, ಖಾದ್ಯ ತೈಲ ಬೇಸಿಗೆ ಕಾಲದಲ್ಲಿ ಹೆಚ್ಚಾಗುವುದು ಸಹಜ. ಹಾಗಾಗಿ, ಪಾಮಾಯಿಲ್ ಹೆಚ್ಚುವರಿ ತರಿಸಲಾಗುತ್ತದೆ. ದರ ಹೆಚ್ಚು ಕಡಿಮೆ ಎಲ್ಲವೂ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಭಿಸಿದೆ ಎಂದರು.
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿತ ನನ್ನ ವ್ಯಾಪ್ತಿಗೆ ಬರಲ್ಲ, ಸಿಎಂನ ಕೇಳಬೇಕು. ಆದರೆ, ಖಾದ್ಯ ತೈಲ ಅಗತ್ಯ ದಾಸ್ತಾನು ಇದೆ. ಕಬ್ಬಿಣದ ಬೆಲೆ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿದೆ. ಎಣ್ಣೆ, ಕಬ್ಬಿಣ ಎಲ್ಲ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಭಿಸಿದೆ. ಪ್ರತಿ ಬಾರಿ ಬೇಸಿಗೆ ಕಾಲದಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳ ಆಗಲಿದೆ. ಇದಕ್ಕೆ ಯುದ್ದ ಕಾರಣವಲ್ಲ. ಹಾಗಾಗಿ, ನಮ್ಮಿಂದ ಮಾರುಕಟ್ಟೆ ನಿಯಂತ್ರಣ ಸಾಧ್ಯವಿಲ್ಲ, ಮಾರ್ಕೆಟ್ ಈಸ್ ಮಾರ್ಕೆಟ್ ಎಂದು ಅಗತ್ಯ ವಸ್ತು ಬೆಲೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಕೈಚಲ್ಲಿದರು.