ಬೆಂಗಳೂರು: ಪಾರ್ಕಿನ್ಸನ್ ರೋಗಕ್ಕೆ ಒಳಗಾಗುವವರ ಪ್ರಮಾಣ 2030ರ ವೇಳೆಗೆ ಶೇ. 200-300ರಷ್ಟು ಹೆಚ್ಚಾಗಲಿದ್ದು, ಈ ದಿಕ್ಕಿನಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಪಾರ್ಕಿನ್ಸನ್ ರಿಸರ್ಚ್ ಅಲಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಒಂದು ಲಕ್ಷ ಜನರಲ್ಲಿ 350-400 ಜನರು ಪಾರ್ಕಿನ್ಸನ್ ರೋಗಕ್ಕೆ ಒಳಗಾಗುತ್ತಿದ್ದಾರೆ. ಈ ಪ್ರಮಾಣ 2030ರ ವೇಳೆಗೆ ಶೇ. 200-300ರಷ್ಟು ಹೆಚ್ಚಲಿದೆ. ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಜನರು ಈ ರೋಗದಿಂದ ಸಮಸ್ಯೆಗೆ ಒಳಗಾಗಲಿದ್ದಾರೆ. ಕೆಸಿಎಲ್-ಪಿಎಆರ್ಐ ಕಾರ್ಯಕ್ರಮವು ಪಾರ್ಕಿನ್ಸನ್ ರೋಗಕ್ಕೆ ಸಂಬಂಧಿಸಿದ ಸಂಶೋಧನೆಗೆ ನೆರವಾಗಲಿದೆ ಎಂದರು.
ನ್ಯೂರೋ ಡಿಜನರೇಟಿವ್ ಕಾಯಿಲೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕೆ ನಿಮ್ಹಾನ್ಸ್ ಗುರುತಿಸಿಕೊಂಡಿದೆ. ಪಾರ್ಕಿನ್ಸನ್ ರೋಗಕ್ಕೆ ಸಂಬಂಧಪಟ್ಟಂತೆ ನಿಮ್ಹಾನ್ಸ್ ಪಿಎಆರ್ಐನ ಇತರೆ ಕೇಂದ್ರಗಳೊಂದಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲಿದೆ. ಅಕಾಡೆಮಿಕ್ ತರಬೇತಿ ಹಾಗೂ ಸಂಶೋಧನಾ ವಲಯದಲ್ಲಿ ಕೆಸಿಎಲ್-ಪಿಎಆರ್ಐ ಜೊತೆ ಕಾರ್ಯನಿರ್ವಹಿಸುವ ಅವಕಾಶಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಲಿದೆ ಎಂದು ಹೇಳಿದರು.