ಬೆಂಗಳೂರು:ಈರುಳ್ಳಿ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ ಹೆಚ್ಚು ಈರುಳ್ಳಿ ಹೆಚ್ಚು ಪ್ರಮಾಣದಲ್ಲಿ ಖರೀದಿಸಿದರೆ ಆದಾಯ ತೆರಿಗೆ ದಾಳಿ ಆಗುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಹೆಚ್ಚು ಈರುಳ್ಳಿ ಖರೀದಿಸಿದ್ರೆ ಆದಾಯ ತೆರಿಗೆ ದಾಳಿಯಾಗುತ್ತೆ: ದಿನೇಶ್ ಗುಂಡೂರಾವ್ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈರುಳ್ಳಿ ಬೆಲೆ ಏರಿಕೆ ಸರ್ಕಾರದ ವೈಫಲ್ಯಕ್ಕೆ ಅತಿ ದೊಡ್ಡ ಉದಾಹರಣೆ. ದೇಶದ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಇದು ಸಾಕ್ಷಿ. ನೋಟ್ ಬ್ಯಾನ್ ಆದ್ಮೇಲೆ ಎಲ್ಲ ಕ್ಷೇತ್ರ ಹಾಳಾಗುತ್ತಿದೆ. ಕೇಂದ್ರ ಸರ್ಕಾರ ಇನ್ನಾದ್ರೂ ಎಚ್ಚೆತ್ತುಕೊಳ್ಳಲಿ. ಚಿಕನ್ ಬೆಲೆಗಿಂತ ಈರುಳ್ಳಿ ಬೆಲೆ ಜಾಸ್ತಿಯಾಗಿದೆ. ಈರುಳ್ಳಿಗೆ 150 ರೂ. ಕೊಡುವ ಪರಿಸ್ಥಿತಿ ಬಂದಿದೆ.
ಈರುಳ್ಳಿ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ, ಈರುಳ್ಳಿ ಹೆಚ್ಚು ಪ್ರಮಾಣದಲ್ಲಿ ಖರೀದಿಸಿದರೆ ಆದಾಯ ತೆರಿಗೆ ದಾಳಿ ಆಗುವ ಸಾಧ್ಯತೆ ಇದೆ. ದೇಶದ ಆರ್ಥಿಕ ಸ್ಥಿತಿ ಯಾವ ಹಂತ ತಲುಪಿದೆ ಎನ್ನುವುದಕ್ಕೆ ಈ ಮಾತು ಉದಾಹರಣೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಜನರಿಗೆ ಆದಾಯ ಇಲ್ಲ, ಉದ್ಯೋಗ ಇಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಒಂದು ದಿನವೂ ಕೂಡ ಮಾತನಾಡಿಲ್ಲ. ತಮ್ಮ ವಿಚಾರವನ್ನು ಮಂಡಿಸಿಲ್ಲ. ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಸ್ಥಿತಿ ಕುರಿತು ಮಾತನಾಡಲು ಒದ್ದಾಡುತ್ತಿದ್ದಾರೆ. ಅವರೇ ಮಾತಾಡಬೇಕು ಸರ್ಕಾರದ ಪರವಹಿಸಿ, ಹೇಳಿಕೆ ನೀಡಬೇಕಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಮಾತನಾಡುತ್ತಿಲ್ಲ. ಯಾಕೆ ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ. ಈ ಸ್ಥಿತಿ ಬರಲು ನಾವು ಏನೇನು ತಪ್ಪು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಲೆಯೇರಿಕೆಯನ್ನು ಹೇಗೆ ನಿಯಂತ್ರಿಸುತ್ತೇವೆ ಎನ್ನುವುದನ್ನು ವಿವರಿಸಬೇಕು. ಬೇರೆ ವಿಚಾರಗಳನ್ನೆಲ್ಲ ಮಾತನಾಡುವವರು ಈ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಇಂತಹ ಗಂಭೀರವಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಪ್ರಧಾನಿಗೆ ಸಮಯವಿಲ್ಲ ಎಂದರೆ, ಸರ್ಕಾರದ ಅಲಕ್ಷ ಮನೋಭಾವ ತೋರಿಸುತ್ತದೆ. ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ ಎಂಬುದನ್ನು ತೋರಿಸುತ್ತದೆ. ತಾನು ಮಾಡಿದ ಮಹಾ ತಪ್ಪು ಒಪ್ಪಿಕೊಳ್ಳಲು ಸರ್ಕಾರ ಸಿದ್ದವಿಲ್ಲ. ಜಿಎಸ್ಟಿ ನೋಟ್ ಬ್ಯಾನ್ ಸೇರಿದಂತೆ ಹಲವು ಕ್ರಮಗಳು ತಪ್ಪಾಗಿದೆ. ಆರ್ಥಿಕ ನೀತಿ ಸರಿಯಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ದೇಶ ಚೆನ್ನಾಗಿದ್ದರೆ,ನಾವು ಚೆನ್ನಾಗಿರುವುದು. ದೇಶದ ಆರ್ಥಿಕ ಸ್ಥಿತಿ ಕುಸಿದು ಹೋದರೆ,125 ಕೋಟಿ ಜನ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
ಲೋಕಸಭೆಯಲ್ಲಿ ಆರ್ಥಿಕ ಸ್ಥಿತಿಯ ಕುರಿತ ಚರ್ಚೆಯಲ್ಲಿ ಪ್ರಧಾನಿ ಕೂಡ ಪಾಲ್ಗೊಳ್ಳಬೇಕು. ಯಾಕೆ ಭಾಗವಹಿಸುತ್ತಿಲ್ಲ. ಸಾಮಾನ್ಯ ಜನರ ಬದುಕು ನರಕವಾಗಿದೆ. ಬಿಜೆಪಿಯವರು ಈ ವಿಚಾರದಲ್ಲಿ ವಿಶೇಷ ಗಮನಹರಿಸಬೇಕು. ಲೋಕಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಸಮಸ್ಯೆ ನಿವಾರಿಸಬೇಕು. ಈರುಳ್ಳಿ ಬೆಲೆ ಏರಿಕೆ ಸೇರಿದಂತೆ ಹಲವು ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದ್ದು,ಇದರ ನಿಯಂತ್ರಣಕ್ಕೆ ಪರಿಹಾರ ಹುಡುಕುವ ಕಾರ್ಯ ಮಾಡಬೇಕು ಎಂದರು.