ಬೆಂಗಳೂರು :ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕೆ ರಾಜ್ಯದಲ್ಲಿ ಏಕರೂಪ ದರಪಟ್ಟಿ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು. 2022-23ನೇ ಸಾಲಿನ ಲೋಕೋಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ವಿವಿಧ ಇಂಜಿನಿಯರ್ ವಿಭಾಗಗಳಲ್ಲಿ ಒಂದೊಂದು ರೀತಿಯ ದರ ಪಟ್ಟಿ ಇತ್ತು. ಹೀಗಾಗಿ, ರಾಜ್ಯದಲ್ಲಿ 32 ದರಪಟ್ಟಿಗಳಿದ್ದವು. ಎಲ್ಲ ಇಂಜಿನಿಯರಿಂಗ್ ವಿಭಾಗದ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ದರ ಪಟ್ಟಿಗೆ ಬದಲಾಗಿ ಏಕರೂಪ ದರಪಟ್ಟಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಹಣವು ಉಳಿತಾಯವಾಗಲಿದೆ ಎಂದರು.
2018-19ರಲ್ಲಿ ಆಗಿರುವ ಹೊರೆ ತಗ್ಗಿಸುವ ಉದ್ದೇಶದಿಂದ 'ಅಪೆಂಡಿಕ್ಸ್-ಇ'ನಲ್ಲಿ ಅನುದಾನ ಕೊಡಲು ಸಾಧ್ಯವಾಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಮುಖ್ಯಮಂತ್ರಿಗಳ ಜತೆ 'ಅಪೆಂಡಿಕ್ಸ್-ಇ'ನಲ್ಲಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಮಲೆನಾಡು ಭಾಗದಲ್ಲಿ ಸಣ್ಣ ಸಣ್ಣ ಹಳ್ಳ ತೊರೆಗಳಿಗೆ ಕಾಲು ಸಂಕ ಅಥವಾ ಗ್ರಾಮ ಬಂಧು ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಉತ್ತಮ ಗುಣಮಟ್ಟದ ರಸ್ತೆ ಜಾಲ ನಿರ್ಮಾಣ :ರಾಜ್ಯದ ಪ್ರಮುಖ ನಗರಗಳಿಗೆ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುವುದು. ಉತ್ತಮ ಗುಣಮಟ್ಟದ ರಸ್ತೆ ಜಾಲ ನಿರ್ಮಾಣಕ್ಕೆ ಸರ್ಕಾರ ಬದ್ದವಾಗಿದೆ. ರಾಜ್ಯದಲ್ಲಿ 91,120 ಕಿ.ಮೀ ರಸ್ತೆ ಜಾಲವಿದ್ದು, 7 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಒದಗಿಸಲಾಗಿದೆ.
ಟೆಂಡರ್ ಕರೆಯುವಾಗ ನಿಗದಿತ ದರಕ್ಕಿಂತ ಕಡಿಮೆ ನಮೂದಿಸುವ ಗುತ್ತಿಗೆಗಾರರ ಕಾಮಗಾರಿ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು. ಕಡಿಮೆ ಮೊತ್ತ ನಮೂದಿಸುವುದನ್ನು ತಡೆಯಲು ಆಗದು ಎಂದು ಹೇಳಿದರು. ಇನ್ನು ಮುಂದೆ ರಾಜ್ಯದಲ್ಲಿ ಅತಿಥಿಗೃಹವನ್ನು ಅವಶ್ಯಕತೆ ಇರುವ ಕಡೆ ಮಾತ್ರ ಮಾಡಲಾಗುವುದು ಎಂದರು.