ಕರ್ನಾಟಕ

karnataka

ETV Bharat / city

ಮುಂದಿನ ವರ್ಷದಿಂದ ಭಗವದ್ಗೀತೆ, ಮಹಾಭಾರತ ಅಂಶಗಳಿರುವ ನೈತಿಕ ಶಿಕ್ಷಣ ಅಳವಡಿಕೆ : ಸಚಿವ ಬಿ.ಸಿ.ನಾಗೇಶ್ - Minister B.C.Nagesh

ಯಾವ ಧರ್ಮದ ಮಕ್ಕಳು ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವಂತಹ ವಿಚಾರಗಳನ್ನು ಅಳವಡಿಸುತ್ತೇವೆ. 90% ಮಕ್ಕಳು ಯಾರು ಇರುತ್ತಾರೋ ಆ ಧರ್ಮದ ಅಂಶಗಳು ಹೆಚ್ಚು ಇರುತ್ತವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದ್ದಾರೆ..

Minister B.C.Nagesh
ಸಚಿವ ಬಿ.ಸಿ.ನಾಗೇಶ್​

By

Published : Apr 19, 2022, 12:34 PM IST

ಬೆಂಗಳೂರು :ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ ಮಾಡಲಾಗುವುದು. ಇದರಲ್ಲಿ ಭಗವದ್ಗೀತೆ, ಪಂಚತಂತ್ರ ಕಥೆಗಳು, ಮಹಾಭಾರತ ಎಲ್ಲವೂ ಭಾಗವಾಗಿರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಯಾವ ವಿಚಾರ ಮಕ್ಕಳ ನೈತಿಕತೆ ಹೆಚ್ಚು ಮಾಡುತ್ತವೆಯೋ ಅದನ್ನು ಅಳವಡಿಸುತ್ತೇವೆ.

ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲ. ಯಾವ ಉತ್ತಮ ಅಂಶ ನಮ್ಮ ಮಕ್ಕಳಿಗೆ ಒಳ್ಳೆಯದು ಮಾಡುತ್ತದೆಯೋ ಅದು ಯಾವುದೇ ಧರ್ಮದ್ದಾಗಿರಲಿ, ಅವುಗಳನ್ನು ಅಳವಡಿಕೆ ಮಾಡುತ್ತೇವೆ. ಆದರೆ, ಯಾವ ಧರ್ಮದ ಮಕ್ಕಳು ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವಂತಹ ವಿಚಾರಗಳನ್ನು ಅಳವಡಿಸುತ್ತೇವೆ. 90% ಮಕ್ಕಳು ಯಾರು ಇರುತ್ತಾರೋ ಆ ಧರ್ಮದ ಅಂಶಗಳು ಹೆಚ್ಚು ಇರುತ್ತವೆ. ಇದು ಅನಿವಾರ್ಯ ಎಂದರು.

'ಟಿಪ್ಪು ಮೈಸೂರು ಹುಲಿ' ಪಠ್ಯದಲ್ಲಿ ಕೈಬಿಟ್ಟಿಲ್ಲ :ಪಠ್ಯದಿಂದ ಟಿಪ್ಪು ಮೈಸೂರು ಹುಲಿ ಎಂಬುದನ್ನು ಕೈ ಬಿಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಟಿಪ್ಪು ಪಾಠವನ್ನು ಪಠ್ಯದಿಂದ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತಾಗಿ ಸಾಕ್ಷಿ ಸಹಿತ ಬೇಡಿಕೆ ಇಟ್ಟಿದ್ದಾರೆ‌ ಎಂದರು. ಟಿಪ್ಪು ಪಾಠವನ್ನು ಕೈಬಿಡಲ್ಲ ಅಂತಾದರೆ ಟಿಪ್ಪುವಿನ ಎಲ್ಲ ಮುಖ ತೋರಿಸಿ.

ಟಿಪ್ಪು ಕನ್ನಡ ವಿರೋಧಿಯಾಗಿದ್ದರು. ಕನ್ನಡ ಭಾಷೆ ಬದಲಾಗಿ ಪರ್ಷಿಯನ್ ಭಾಷೆಯನ್ನು ಆಡಳಿತಕ್ಕೆ ತಂದರು. ಕೊಡಗಿನಲ್ಲಿ ದೌರ್ಜನ್ಯ ಮಾಡಿರುವ ಅಂಶಗಳನ್ನು ಪಠ್ಯದಲ್ಲಿ ಸೇರಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಟಿಪ್ಪು ವಿಚಾರಗಳನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಮೈಸೂರು ಹುಲಿ ಎಂಬ ಅಂಶವನ್ನು ಕೈಬಿಟ್ಟಿಲ್ಲ. ಅನಗತ್ಯ ಅಂಶಗಳನ್ನು ಕೈಬಿಡಲಾಗುವುದು. ಯಾವ ಅಂಶವನ್ನು ಕೈಬಿಡಲಾಗುವುದು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದರು.

ಮದರಸಾಗಳಲ್ಲಿ ಶಿಕ್ಷಣ ಇಲಾಖೆ ಪಠ್ಯ ಅಳವಡಿಕೆಗೆ ಮನವಿ :ಮದರಸಾಗಳಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮ ಅಳವಡಿಕೆಗೆ ಮದರಸಾಗಳಿಂದ ಬೇಡಿಕೆ ಬಂದಿಲ್ಲ. ಆದರೆ, ಪೋಷಕರು ಮದರಸಾ ಶಿಕ್ಷಣದಿಂದ ನಮ್ಮ ಮಕ್ಕಳು ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಆಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಕಷ್ಟ ಆಗುತ್ತಿದೆ. ಪ್ರೊಫೆಷನಲ್ ಕೋರ್ಸ್ ಪಡೆದುಕೊಳ್ಳುವುದು ಕಷ್ಟ. ಬೇರೆ ಮಕ್ಕಳಿಗೆ ‌ಕೊಟ್ಟ ಹಾಗೆ ಶಿಕ್ಷಣ ಕೊಡಿ ಎಂಬ ಮನವಿ ಮಾಡಿದ್ದಾರೆ ಎಂದರು‌. ಆದರೆ, ಮದರಸಾ ಕಡೆಯಿಂದ ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ಯಾವುದೇ ಮನವಿ ಬಂದಿಲ್ಲ. ಪೋಷಕರೇನೂ ಅಧಿಕೃತವಾಗಿ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಸಂಪುಟ ವಿಸ್ತರಣೆ ವಿಷಯಕ್ಕೂ ಮೊದಲು ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ಪ್ರಾಮುಖ್ಯತೆ: ಸಿಎಂ ಬೊಮ್ಮಾಯಿ

ABOUT THE AUTHOR

...view details