ಬೆಂಗಳೂರು :ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದ ಜನರ ಮೇಲೆ ಆದ ಪರಿಣಾಮದ ಕುರಿತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 9 ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ನಡೆಸಿದೆ. ಬೆಂಗಳೂರಿನ 33 ವಾರ್ಡ್ಗಳ ವ್ಯಾಪ್ತಿಯಲ್ಲಿ ಬರುವ 92 ಕಡಿಮೆ ಆದಾಯವುಳ್ಳ ವಸತಿ ಪ್ರದೇಶಗಳಲ್ಲಿನ 3,000 ಕುಟುಂಬಗಳನ್ನು ಒಳಗೊಂಡ ಸಮೀಕ್ಷೆಯನ್ನು ಕೈಗೊಂಡಿತ್ತು.
ಸಮೀಕ್ಷೆಯ ಉದ್ದೇಶ? :ಕೋವಿಡ್-19 ಸಲುವಾಗಿ ವಿಧಿಸಲಾದ ಲಾಕ್‌ಡೌನ್‌ಗಳು, ಇದರಿಂದ ಜನರ ಉದ್ಯೋಗ ಮತ್ತು ಜೀವನೋಪಾಯಗಳ ಮೇಲೆ ಬೀರುತ್ತಿರುವ ಆರ್ಥಿಕ ದುಸ್ತರತೆಯ ಪರಿಣಾಮಗಳ ಸ್ವರೂಪವನ್ನು ಪರಿಶೀಲಿಸುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು. ಜತೆಗೆ, ಸರ್ಕಾರದ ನೆರವಿನ ಲಭ್ಯತೆ ಹಾಗೂ ಜನರು ಈ ಸಂಕಷ್ಟದ ಕಾಲವನ್ನು ನಿಭಾಯಿಸಿದ ವಿಧಾನಗಳ ಬಗ್ಗೆಯೂ ಈ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸಲಾಯಿತು.
ಸಮೀಕ್ಷೆಯಲ್ಲಿ ಉದ್ಯೋಗಗಳಲ್ಲಿ ತೊಡಗಿರುವ ವಾಹನ ಚಾಲಕರು (ಟ್ಯಾಕ್ಸಿ, ಆಟೋ, ಮತ್ತು ಇತರೆ), ದಿನಗೂಲಿ ನೌಕರರು (ಕಟ್ಟಡ ನಿರ್ಮಾಣ ಮತ್ತು ಇತರೆ), ಮನೆಗೆಲಸದವರು ಮತ್ತು ಕಾರ್ಖಾನೆಗಳ ಕಾರ್ಮಿಕರು (ಗಾರ್ಮೆಂಟ್ ಮತ್ತು ಇತರೆ)ಒಳಗೊಂಡಿದ್ದರು. ಸಮೀಕ್ಷೆಯನ್ನು 2021ರ ನವೆಂಬರ್‌ನಲ್ಲಿ ಆ್ಯಕ್ಷನ್ ಏಯ್ಡ್, ಅಸೋಸಿಯೇಶನ್ ಫಾರ್ ಪ್ರೊಮೋಟಿಂಗ್ ಸೋಶಿಯಲ್ ಆ್ಯಕ್ಷನ್ (APSA), ದಿ ಸೆಂಟರ್ ಫಾರ್ ಅಡ್ವೊಕೆಸಿ ಅಂಡ್ ರಿಸರ್ಚ್ (CFAR), ಹಸಿರು ದಳ, ಗುಬ್ಬಚ್ಚಿ, ರೀಚಿಂಗ್ ಹ್ಯಾಂಡ್, ಸಂಗಮ, ಸ್ವಾಭಿಮಾನ್ ಟ್ರಸ್ಟ್ ಹಾಗೂ ತಮಟೆ ಈ ಸಂಘಟನೆಗಳ ನೆರವಿನೊಂದಿಗೆ ನಡೆಸಲಾಯಿತು.
ಅವಕಾಶ ವಂಚಿತ ವರ್ಗಗಳ ಬದುಕು ದುಸ್ತರ :ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮೀಕ್ಷಾ ತಂಡದ ಮುಖ್ಯ ಸಂಶೋಧಕ ಅಮಿತ್ ಬಸೋಲೆ ಮಾತಾನಾಡಿ, ಜನರ ಜೀವನೋಪಾಯದ ಮೇಲಿನ ಸಾಂಕ್ರಾಮಿಕದ ದುಷ್ಪರಿಣಾಮಗಳು ಲಾಕ್ಡೌನ್ ಅವಧಿಯ ನಂತರವೂ ಮುಂದುವರೆದಿವೆ. ನಿರ್ದಿಷ್ಟವಾಗಿ, ಸಮಾಜದ ಅವಕಾಶವಂಚಿತ ವರ್ಗಗಳಿಗೆ ಬದುಕು ಇನ್ನೂ ದುಸ್ತರವಾಗಿದೆ. ಈ ಬಿಕ್ಕಟ್ಟಿನಿಂದ ಜನರು ಹೊರಬರುವಂತಾಗಲು ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ದೀಘಾವಧಿ ಪರಿಣಾಮವುಳ್ಳ ನಿರ್ದಿಷ್ಟ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಬಳಿಕ ಸಮೀಕ್ಷೆಯ ವರದಿ ಬಗ್ಗೆ ವಿಸ್ತರಿಸಿದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮೀಕ್ಷಾ ತಂಡದ ಸದಸ್ಯ ಮಂಜುನಾಥ್, 2020ರ ಲಾಕ್ಡೌನ್ ಅವಧಿಯ ನಂತರವೂ ಉದ್ಯೋಗ ಮತ್ತು ಆದಾಯ ನಷ್ಟಗಳು ಮುಂದುವರೆದಿವೆ. ಜನವರಿ- ಫೆಬ್ರವರಿ 2021ರಲ್ಲಿ ಕೂಡ ಶೇ.41ರಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಲ್ಲದೇ, ಶೇ.21ರಷ್ಟು ಜನರ ಆದಾಯ ಕುಂಠಿತವಾಗಿತ್ತು. ದಿನಗೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು ಮತ್ತು ಚಿಲ್ಲರೆ ವ್ಯಾಪಾರ ರಂಗದಲ್ಲಿ ತೊಡಗಿರುವ ಶ್ರಮಿಕರು ಅತ್ಯಂತ ಹೆಚ್ಚಿನ ಹಾನಿಗೊಳಗಿದ್ದಾರೆ.