ಬೆಂಗಳೂರು:ಸಿ.ಪಿ ಯೋಗೀಶ್ವರ್ ಪರ ಲಾಬಿ ನಡೆಸುತ್ತಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಡೆ ಹಾಗೂ ರಾಜೀನಾಮೆ ಕೊಟ್ಟು ಬಂದವರ ನಿರ್ಲಕ್ಷ್ಯ ಧೋರಣೆಗೆ ತೀವ್ರ ಅಸಮಾಧಾನಗೊಂಡಿರುವ ಬಾಂಬೆ ತಂಡದ ಸದಸ್ಯರು ಜಾರಕಿಹೊಳಿ ಬಿಟ್ಟು ಸಭೆ ನಡೆಸಿ ಸಿಎಂ ಬಿಎಸ್ವೈ ನಾಯಕತ್ವದ ಪರ ಗಟ್ಟಿಯಾಗಿ ನಿಲ್ಲುವ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ರಾತ್ರಿ ಭೋಜನ ಕೂಟದ ನೆಪದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ, ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಬಾಂಬೆ ಟೀಂ ಎಂದು ಕರೆಸಿಕೊಳ್ಳುವ ಸದಸ್ಯರು ಸಭೆ ನಡೆಸಿದ್ದಾರೆ.
ಹೊರರಾಜ್ಯದಲ್ಲಿರವ ಕಾರಣ ಸುಧಾಕರ್ ಹೊರತುಪಡಿಸಿ ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಗೋಪಾಲಯ್ಯ, ಬಿ.ಸಿ ಪಾಟೀಲ್, ನಾರಾಯಣಗೌಡ, ಮುನಿರತ್ನ, ವಿಶ್ವನಾಥ್ ಸೇರಿದಂತೆ ಉಳಿದವರು ಭಾಗಿಯಾಗಿದ್ದರು ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಚಿವ ಜಾರಕಿಹೊಳಿ ಅನಗತ್ಯವಾಗಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪದೇ ಪದೆ ಶಾಸಕರ ಸಭೆ ನಡೆಸಿ ಪರ್ಯಾಯ ಶಕ್ತಿ ಕೇಂದ್ರ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಸಭೆಯಲ್ಲಿ ವಲಸಿಗ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.
ಸಿ.ಪಿ ಯೋಗೇಶ್ವರ್ ಪರ ಓಡಾಡುತ್ತಿರುವುದಕ್ಕೆ ಸಿಟ್ಟಾದ ಶಾಸಕರು, ತಮ್ಮನ್ನು ತಾವು ವಲಸಿಗರ ನಾಯಕನಂತೆ ಬಿಂಬಿಸಿಕೊಳ್ಳುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಬಾಂಬೆಯಲ್ಲಿದ್ದಾಗ ಒಗ್ಗಟ್ಡು ಬೇಕಿತ್ತು ಈಗ ಆ ಒಗ್ಗಟ್ಟು ಜಾರಕಿಹೊಳಿಗೆ ಬೇಡವಾದಂತಿದೆ. ಆದರೆ, ನಾವೆಲ್ಲ ಒಗ್ಗಟ್ಟಾಗಿರಬೇಕು, ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲವಾಗಿರಬೇಕು, ನಮ್ಮೊಂದಿಗೆ ಬಂದವರನ್ನು ಸಚಿವರನ್ನಾಗಿ ಮಾಡಲು ಪ್ರಯತ್ನಿಸಬೇಕೆಂದು ನಿರ್ಧಾರ ಕೈಗೊಂಡರು ಎನ್ನಲಾಗಿದೆ.