ಬೆಂಗಳೂರು: ಕನ್ನಡ ಹೋರಾಟಕ್ಕೆ ಧರ್ಮ ಮತ್ತು ರಾಜಕೀಯದ ಬಣ್ಣ ಬಳಿದು ಪೊಲೀಸರ ಮೂಲಕ ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ನಡೆ ಖಂಡನೀಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಅವರು ಸರಣಿ ಟ್ವೀಟ್ ಮೂಲಕ ಹರಿಹಾಯ್ದಿದ್ದು, ಬಂಧಿತ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಈ ಸಂಬಂಧ ಇನ್ನೊಂದು ಟ್ವೀಟ್ ಮಾಡಿರುವ ಅವರು, ಕನ್ನಡ ನೆಲ-ಜಲ-ಭಾಷೆಯ ರಕ್ಷಣೆಗಾಗಿ ನಡೆಯುವ ಹೋರಾಟವನ್ನು ರಾಜ್ಯ ಸರ್ಕಾರ ಗೌರವಿಸಬೇಕು, ದಮನಿಸಲು ಹೋಗಬಾರದು. ಅವರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಬೇಕು, ಅಸಾಧ್ಯವಾದುದನ್ನು ಅವರಿಗೆ ತಿಳಿಸಿ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸಹ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಟ್ವೀಟ್ ಮಾಡಿರುವ ಅವರು, ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲವೆಂದು ಭಾವೋದ್ವೇಗದಿಂದ ಹೋರಾಟ ಮಾಡುವುದು ತಪ್ಪಲ್ಲ. ಅವರು ಯಾವ ರೀತಿಯ ಹಾನಿ ಮಾಡದಿದ್ದರೂ ಅವರನ್ನು ರೌಡಿ, ಕಿಡಿಗೇಡಿಗಳೆಂದೆಲ್ಲ ಅವಮಾನಿಸಿ, ಜಾಮೀನು ರಹಿತ ಮೊಕ್ಕದ್ದಮ್ಮೆ ದಾಖಲಿಸಿರುವುದು ನಾಡದ್ರೋಹಿ ಕೆಲಸ. ಸರ್ಕಾರ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ.