ಬೆಂಗಳೂರು : ಐಎಂಎ ವಂಚನೆ ಪ್ರಕರಣ ಆರೋಪಿ ಮನ್ಸೂರ್ ಖಾನ್‌ಗೆ ಆಸ್ತಿ ಮಾರಾಟ ಮಾಡಿದ ವಿಚಾರವಾಗಿ ಇಡಿ ಅಧಿಕಾರಿಗಳು ತಮಗೆ ನೀಡಿದ ನೋಟಿಸ್ಗೆ ಜುಲೈ 5 ರೊಳಗೆ ಉತ್ತರ ನೀಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮನ್ಸೂರ್ ಖಾನ್‌ಗೆ ಆಸ್ತಿ ಮಾರಾಟ ಮಾಡಿರುವ ವಿಚಾರವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿವರಣೆ ಕೇಳಿ ನೊಟೀಸ್ ನೀಡಿದ್ದಾರೆ.
ಸಮನ್ಸ್ ಜಾರಿ ಕುರಿತು ಪ್ರತಿಕ್ರಿಯಿಸಿದ ಜಮೀರ್, ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಎಂಎ ಕಂಪನಿಗೆ ಆಸ್ತಿ ಮಾರಾಟ ಮಾಡಿದ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಜುಲೈ 5 ರ ವರೆಗೆ ಕಾಲಾವಕಾಶ ಕೊಟ್ಟಿದ್ದಾರೆ. ಐಎಂಎಗೆ ಆಸ್ತಿ ಮಾರಿದ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ಸಕಾಲದಲ್ಲಿ ಇಡಿಗೆ ಒದಗಿಸಿ ತನಿಖೆಗೆ ಸಹಕರಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.