ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಮನ್ಸೂರ್ನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.
ಐಎಂಎ ಬಹುಕೋಟಿ ವಂಚನೆ: ಸಿಬಿಐಗೆ ಸಿಕ್ಕು ಮಹತ್ವದ ಮಾಹಿತಿ - ಐಎಂಎ ವಂಚನೆ ಪ್ರಕರಣದ ಸಿಬಿಐ ತನಿಖೆ
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಹಗರಣದ ಪ್ರಮುಖ ಆರೋಪಿ ಮನ್ಸೂರ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮತ್ತೊಂದು ಮಹತ್ವದ ಮಾಹಿತಿ ಬಹಿರಂಗವಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರ ಮನ್ಸೂರ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಬದಲಾಗಿ ಈತ, ವಿದೇಶದಲ್ಲಿಯೂ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಗೊತ್ತಾಗಿದೆ. ವ್ಯವಹಾರದ ಹಣವನ್ನಿಡಲು ಈತ ನೂರಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಹಣದ ನಿರ್ವಹಣೆಗಾಗಿ ಸುಮಾರು 110 ಖಾತೆಗಳನ್ನು ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್ಗಳಲ್ಲಿ ಹೊಂದಿದ್ದನಂತೆ. ಈ ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಸಿಬಿಐ ಅಧಿಕಾರಿಗಳು ಬ್ಯಾಂಕಿನ ಹಣದ ವಹಿವಾಟು ಕುರಿತಾದ ಮಾಹಿತಿಯನ್ನು ಮನ್ಸೂರ್ನಿಂದ ಪಡೆಯುತ್ತಿದ್ದಾರೆ. ಹಾಗೆಯೇ ಐಎಂಎ ಕಂಪನಿಯಿಂದ ಹಲವಾರು ಮಂದಿ ಹಣ ಪಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲಾ ರಾಜಕೀಯ ವ್ಯಕ್ತಿಗಳು, ಮೌಲ್ವಿಗಳು ಹಾಗು ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ಸದ್ಯದಲ್ಲೇ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.