ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಮತ್ತು ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಸಿಬಿಐ ದಾಖಲಿಸಿರುವ ಎಫ್‌ಐಆರ್, ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಆಧರಿಸಿ ಸಿಬಿಐ ವಿಶೇಷ ತೆಗೆದುಕೊಂಡಿರುವ ಕಾಗ್ನಿಜೆನ್ಸ್ ಮತ್ತು ಪ್ರಾಸಿಕ್ಯೂಷನ್‌ಗಾಗಿ ರಾಜ್ಯ ಸರ್ಕಾರ ನೀಡಿರುವ ಪೂರ್ವಾನುಮತಿ ರದ್ದುಪಡಿಸುವಂತೆ ಕೋರಿ ಹೇಮಂತ್ ನಿಂಬಾಳ್ಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ತೀರ್ಪ ಪ್ರಕಟಿಸಿರುವ ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ನಿಂಬಾಳ್ಕರ್ ವಿರುದ್ಧದ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಐಎಂಎ ವಂಚನೆ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಸಲ್ಲಿಸಿದ್ದ ವಿಚಾರಣಾ ವರದಿಯನ್ನು ಸಿಐಡಿ ಡಿಜಿಪಿ ಆಗಿದ್ದ ನಿಂಬಾಳ್ಕರ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸಿ, ಐಎಂಎ ಸಂಸ್ಥೆ ಯಾವುದೇ ತಪ್ಪು ಮಾಡಿಲ್ಲ. ಅದರ ಮುಖ್ಯಸ್ಥರು ಮತ್ತು ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿಲ್ಲ ಎಂದು ಶಿಫಾರಸ್ಸು ಮಾಡಿದ್ದಾರೆ. ಆರ್‌ಬಿಐ ಮನವಿ ನಂತರವೂ ಹಿಂದಿನ ವರದಿ ಮರು ಪರಿಶೀಲಿಸಿಲ್ಲ ಎಂಬ ಕಾರಣಕ್ಕೆ ನಿಂಬಾಳ್ಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಆದರೆ, ವಿಚಾರಣಾ ವರದಿ ರವಾನಿಸಿದ ಮತ್ತು ಹಿಂದಿನ ವರದಿ ಮರು ಪರಿಶೀಲಿಸದ ಕಾರಣಕ್ಕೆ ಅರ್ಜಿದಾರರು ಸುಳ್ಳು ವರದಿ ಸಲ್ಲಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಗೆ ನೆರವು ನೀಡಿದ್ದಾರೆ. ಅದರ ಪ್ರತಿಫಲವಾಗಿ ಕಾನೂನು ಬಾಹಿರವಾಗಿ ಹಣ ಮತ್ತು ಚಿನ್ನಾಭರಣ ಪಡೆದಿದ್ದಾರೆ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬರಲು ಸಾಧ್ಯವಿಲ್ಲ. ಮೇಲಾಗಿ ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸುವಂತಹ ಸೂಕ್ತ ಸಾಕ್ಷ್ಯಧಾರ ಇಲ್ಲ. ಹೀಗಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕ್ರಮ ದೋಷಪೂರಿತವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ :
ಐಎಂಎ ವಂಚನೆ ಹಗರಣದ ಸಂಬಂಧ ದೂರುಗಳು ದಾಖಲಾಗುವ ಸಂದರ್ಭದಲ್ಲಿ ಸಿಐಡಿಯ ಆರ್ಥಿಕ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥರಾಗಿ (ಐಜಿಪಿ) ಹೇಮಂತ್ ನಿಂಬಾಳ್ಕರ್ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ನಿಂಬಾಳ್ಕರ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಜತೆಗೆ, ಐಎಂಎ ಸಂಸ್ಥೆಗೆ ಪೂರಕವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ 2020ರ ಫೆ.2ರಂದು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.