ಬೆಂಗಳೂರು: ನಗರದಾದ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದ್ದು, ಅಂತಹ ಕಟ್ಟಡಗಳನ್ನು ತೆರವು ಮಾಡಲು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಸಾರ್ಜಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನ, ಚರ್ಚ್, ಮಸೀದಿಗಳಂತಹ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಪರಿಣಾಮವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳ ಸಂಪೂರ್ಣ ಸರ್ವೇ ಮಾಡಿಸಿದ್ದೇವೆ. ವಾರ್ಡ್ವಾರು ಹಾಗೂ ಏರಿಯಾವಾರು ಕಾರ್ಯನಿರ್ವಾಹಕ ಎಂಜಿನಿಯರ್ಗಳಿಂದ ಸರ್ವೇ ಮಾಡಿಸಿ ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದೇವೆ. ಈ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸದ್ಯದಲ್ಲೇ ನೋಟಿಸ್ ಜಾರಿ ಮಾಡಿ, ನಂತರ ತೆರವು ಮಾಡುವ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.
ಬಿಬಿಎಂಪಿ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ, ಸರ್ವೇ ನಡೆಸಿರುವುದೇನೋ ಸರಿ. ಆದರೆ ನೀವು ಸಲ್ಲಿಸಿರುವ ವರದಿಗೆ ಜವಾಬ್ದಾರರು ಯಾರು? ಹೀಗಾಗಿ ವರದಿ ನೀಡಿದವರು ಇದಕ್ಕೆ ಜವಾಬ್ದಾರರಾಗುವಂತೆ ಪ್ರಮಾಣಪತ್ರ ಸಲ್ಲಿಸಲು ತಿಳಿಸಿ ಎಂದು ಸೂಚನೆ ನೀಡಿತು. ಇನ್ನು ಧಾರ್ಮಿಕ ಕೇಂದ್ರಗಳ ತೆರವು ಸಂದರ್ಭದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಯನ್ನು ವಿವರಿಸಿದ ಬಿಬಿಎಂಪಿ ಪರ ವಕೀಲರು, ಕೆಲ ದಿನಗಳ ಹಿಂದೆ ಶ್ರೀರಾಮಪುರದ ಗಂಗೈಯಮ್ಮನ ದೇವಸ್ಥಾನ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳ ಮೇಲೆ ಸ್ಥಳೀಯರು ದಾಳಿ ಮಾಡಲು ಮುಂದಾಗಿದ್ದರು. ಹೀಗಾಗಿ ತೆರವು ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಪೊಲೀಸರು ವಿಧಾನಸಭೆ ಅಧಿವೇಶನ ಮುಗಿಯುವರೆಗ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ತೆರವು ಕಾರ್ಯಾಚರಣೆಗೆ ಮುಂದಾಗುವ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು. ವಕೀಲರ ಕೋರಿಕೆ ಪರಿಗಣಿಸಿದ ಪೀಠ, ಸದನದ ಕಲಾಪದ ನೆಪದಲ್ಲಿ ಪೊಲೀಸರು ಭದ್ರತೆ ನೀಡಲು ನಿರಾಕರಿಸುವಂತಿಲ್ಲ. ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡುವುದು ಪೊಲೀಸರ ಕರ್ತವ್ಯ. ಹೀಗಾಗಿ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ಕಾರ್ಯಾಚರಣೆ ನಡೆಸುವ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮಾ. 20 ಕ್ಕೆ ಮುಂದೂಡಿತು.