ಕರ್ನಾಟಕ

karnataka

ETV Bharat / city

ಪಿಎಸ್ಐ ನೇಮಕಾತಿ ಅಕ್ರಮ ; ಗೃಹಸಚಿವರ ರಾಜೀನಾಮೆಗೆ ಹರಿಪ್ರಸಾದ್ ಆಗ್ರಹ - hariprasad demands resignation of home minister

ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ದಕ್ಷ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಇಡೀ ಇಲಾಖೆಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದೀರಿ. ನಿಮಗೆ ನೈತಿಕ ರಾಜಕೀಯ ಮೌಲ್ಯವೇ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ಗೃಹ ಸಚಿವಸ್ಥಾನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ಹೆಚ್ಚು ಮಾತನಾಡದೆ ಈಶ್ವರಪ್ಪ ಮಾದರಿಯಲ್ಲಿ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಖುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿದ್ದಾರೆ..

Legislative council Opposition Leader B.K. Hariprasad
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್

By

Published : Apr 29, 2022, 7:33 PM IST

ಬೆಂಗಳೂರು :ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಾಯಿತು. ಅದಕ್ಷ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ತಮಗೆ ಎರಡೆರಡು ನಾಲಿಗೆ ಇದೆ ಎಂಬುದನ್ನ ಮತ್ತೆ ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

ವಿಧಾನ ಪರಿಷತ್ ಅಧಿವೇಶನದಲ್ಲಿ ಪಿಎಸ್​ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಎದೆ ತಟ್ಟಿ ಹೇಳಿದ್ದ ಗೃಹ ಸಚಿವರು ಇಂದು ನಡು ಬಗ್ಗಿಸಿ ಪಿಎಸ್​ಐ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಆದ್ದರಿಂದ ನೇಮಕಾತಿ ರದ್ದು ಮಾಡಿ ಮರು ಪರೀಕ್ಷೆ ನಡೆಸುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಾವಿಗೂ ಎರಡು ನಾಲಿಗೆ ಇದೆ. ಹಾವಿನ ಪುರದವರಿಗೂ ಕೂಡ ಎರಡೆರಡು ನಾಲಿಗೆ ಇದೆ ಎಂದು ಸಾಬೀತುಪಡಿಸಿದಂತಾಯಿತು ಎಂದಿದ್ದಾರೆ.

ವಿಧಾನ ಪರಿಷತ್ ಅಧಿವೇಶನದಲ್ಲಿ ಪಿಎಸ್​ಐ ನೇಮಕಾತಿಯಲ್ಲಿ ಕೋಟಿ ಕೋಟಿ ಅವ್ಯವಹಾರಗಳು ನಡೆದಿವೆ ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೆ. ರಾಜ್ಯದ ಪ್ರಮುಖ ಪತ್ರಿಕೆಗಳು ಸರ್ಕಾರದ ಮುಖಕ್ಕೆ ರಾಚುವಂತೆ ಇಲಾಖೆಯ ಮುಖವಾಡಗಳನ್ನೇ ಧಾರಾವಾಹಿಗಳಂತೆ ಬಿಚ್ಚಿಟ್ಟಿದ್ದವು. ಆಗ ಸತ್ಯ ಹರಿಶ್ಚಂದ್ರರಂತೆ ಮಾತಾಡಿದ್ದ ಗೃಹ ಸಚಿವರು, ಅಕ್ರಮವೇ ನಡೆದಿಲ್ಲ ಎಂದು ಅಧಿವೇಶನದಲ್ಲಿ ಸುಳ್ಳು ಹೇಳಿಕೆ ಕೊಟ್ಟಿದ್ದರು.

ಈಗ ಸರ್ಕಾರವೇ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡ ಮೇಲೆ ಯಾವ ನೈತಿಕತೆಯ ಮೇಲೆ ಗೃಹ ಸಚಿವರು ಮುಂದುವರೆಯುತ್ತಿದ್ದಾರೆ. ಅಕ್ರಮ ನಡೆಸಿರುವ ಕಿಂಗ್ ಪಿನ್​ಗಳಿಗೆ ತಾಂಬೂಲ ಕೊಟ್ಟು ಕರೆಯುವ ಹಾಗೆ, ದಯವಿಟ್ಟು ವಿಚಾರಣೆಗೆ ಬನ್ನಿ ಎಂದು ಕರೆಯುವಂತಹ ಅದಕ್ಷ ಗೃಹ ಸಚಿವರನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ.

ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬರುವ ಪಿಎಸ್​ಐಗಳ ನೇಮಕಾತಿಯಲ್ಲಿಯೇ ಕೋಟಿ ಕೋಟಿ ಅವ್ಯವಹಾರಗಳು ನಡೆಯುತ್ತಿದ್ದರೂ ನಿಮ್ಮ ಗಮನಕ್ಕೆ ಬಾರದೆ ಅಕ್ರಮ ನಡೆದಿದೆಯೇ? ಸ್ವಇಲಾಖೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಅಸಮರ್ಥರಾಗಿ ಮುಂದುವರೆಯಲು ನಿಮ್ಮನ್ನು ನೈತಿಕತೆ ಪ್ರಶ್ನೆ ಮಾಡುತ್ತಿಲ್ಲವೇ? ಇಷ್ಟಕ್ಕೂ ಸರ್ಕಾರ ಮರು ಪರೀಕ್ಷೆ ನಡೆಸುವುದಾದರೆ ಪ್ರಮಾಣಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಯಾವ ತಪ್ಪಿಗೆ ಶಿಕ್ಷೆ ಅನುಭವಿಸಬೇಕು? ಮುಂದೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅಕ್ರಮ ನಡೆಯುವುದಿಲ್ಲ ಎಂದು ಯಾವ ಮುಖ ಇಟ್ಟುಕೊಂಡು ಭರವಸೆ ಕೊಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

545 ಪಿಎಸ್‌ಐ ಹುದ್ದೆಗಳಿಗೆ ರಾಜ್ಯದಲ್ಲಿ ಒಟ್ಟು 54,289 ಅಭ್ಯರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಲಕ್ಷಾಂತರ ಅಭ್ಯರ್ಥಿಗಳು ಶುಲ್ಕ ಕಟ್ಟಿದ್ದಾರೆ. ಮತ್ತೆ ಅವರಿಂದ ಶುಲ್ಕ ಪಡೆದರೆ ಒಂದೇ ಪರೀಕ್ಷೆಗೆ ಎರಡೆರಡು ಬಾರಿ ಶುಲ್ಕ ಕಟ್ಟಬೇಕೆ? ನಿಮ್ಮ ತಪ್ಪಿಗೆ ಅಭ್ಯರ್ಥಿಗಳಿಗೆ ಬರೆ ಎಳೆಯುವಂತಾಗಲಿದೆ. ಹೀಗಾಗಿ, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಮೊದಲ ಬಾರಿಗೆ ಅರ್ಜಿ ಶುಲ್ಕ ಕಟ್ಟಿದವರಿಗೆ ಉಚಿತ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ದಕ್ಷ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಇಡೀ ಇಲಾಖೆಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದೀರಿ. ನಿಮಗೆ ನೈತಿಕ ರಾಜಕೀಯ ಮೌಲ್ಯವೇ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ಗೃಹ ಸಚಿವಸ್ಥಾನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ಹೆಚ್ಚು ಮಾತನಾಡದೆ ಈಶ್ವರಪ್ಪ ಮಾದರಿಯಲ್ಲಿ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಖುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ದಿವ್ಯಾ ಹಾಗರಗಿ ಬಂಧನದಿಂದ ಹಲವರ ಎದೆ ಢವಢವ : ಇರಬಹುದಾ ಪ್ರಭಾವಿಗಳ ಹಸ್ತಕ್ಷೇಪ!?

ABOUT THE AUTHOR

...view details